( ಸಣ್ಣ ಸಾಂತ್ವನ ಬಯಸಿದ ಆಕೆಯ ಪರಿಸ್ಥಿತಿಗೆ ಮಾತ್ರ ಇವತ್ತಿಗೂ ಮನಸ್ಸು ದ್ರವಿಸಿಹೋಗುತ್ತದೆ. ಅದಕ್ಕೆ ಬಹುಶ: ನಮ್ಮ ಹೆಣ್ಣು ಮಕ್ಕಳು ಇವತ್ತಿಗೂ ಒಂದು ಕೈ ಮೇಲಿದ್ದಾರೆ ಅನ್ನಿಸುತ್ತದೆ. ) ಅವಳು ತುಂಬಾ ಸೂಕ್ಷ್ಮ ಮನಸ್ಸಿನವಳಾಗಿದ್ದಳಾ...? ಗೊತ್ತಿಲ್ಲ ಆದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗಿರಬೇಕಾದ ಗಾಂಭಿರ್ಯ, ಕನಿಷ್ಠ ಸ್ವಾಭಿಮಾನ ಆಕೆಯಲ್ಲಿದ್ದುದನ್ನು ನಾನು ಗುರುತಿಸಿದ್ದೆ. ಯಾಕೆಂದರೆ ಉಳಿದೆಲ್ಲಾ ವಿಷಯದಲ್ಲಿ ಆಕೆ ನನ್ನನು ಭರಿಸಬಲ್ಲಳಾಗಿದ್ದರೂ ತನ್ನ ಗಂಡ ಕುಡುಕ. ತಿರ ಸಟ್ಟಸರ ಹೊತ್ತಿನಲ್ಲಿ ಕುಡಿದುಕೊಂಡು ಗಲ್ಲಿ ಗಲ್ಲಿ ಸರ್ವೇ ಮಾಡುತ್ತಾ ಬರುತ್ತಾನೆ ಹಾಗೆ ಬಂದಾಗ ಅವನನ್ನು ರೂಮಿಗೊಯ್ದು ಮಲಗಿಸುವ ಕಾಯಕ ಉಳಿದದವರಿಗೆ ಗೊತ್ತಾಗಿಬಿಡುತ್ತದೆನ್ನುವ ಧಾವಂತ, ಒಂದು ಕಡೆಯಲ್ಲಿ ನೋವು, ಅದಕ್ಕಿಂತಲೂ ಹೆಚ್ಚಾಗಿ ಸುತ್ತ ಮುತ್ತ ಇದ್ದ ಬಾಡಿಗೆದಾರರಿಗೆ ಈ ಓನರ್ರು ಭಯಂಕರ ಬಾಟ್ಲಿ ಎನ್ನಿಸಿಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಅದರಲ್ಲೂ ನನ್ನೆದುರಿಗೆ. ಉಳಿದ ಕಡೆಯಲ್ಲಿ ಆಕೆಗಷ್ಟು ವ್ಯತ್ಯಾಸವಾಗುತ್ತಿರಲಿಲ್ಲ. ಆದರೆ ನನ್ನೆದುರಿನಲ್ಲಿ ಒಂದು ರೀತಿಯ ಸಂಕೊಚ ಮುಜುಗರ ಖಂಡಿತಾ ಆಗುತ್ತಿತ್ತು. ಕಾರಣ ನಾನು ಆ ರೂಮಿಗೆ ಬಂದ ನಾಲ್ಕೇ ದಿನಗಳಲ್ಲಿ ಅಲ್ಲೊಂದು ರೀತಿಯ ಭರಿಸಲಾಗದ ಒತ್ತಡ ಗಮನಕ್ಕೆ ಬಂದಿತ್ತು. ಮಛೇಯ ಚಿಕ್ಕ ಚಾಳ್ ಅದು. ಅಲ್ಲಿಂದ ಏಳು ಕೀ.ಮಿ. ದೂರ ಬೆಳಗಾವಿ. ಈಗ ಬಿಡಿ ಇವೆಲ್ಲ ಏರಿಯಾವನ್ನು ನುಂಗಿ ಬೆಳಗಾವಿ ಬೆಳೆಯುತ್ತಿದೆ. ಹಾಗೆ ಅಲ್ಲಿರುತ್ತಿದ್ದಾಗ ಹಿಂದಿನ ಮನೆಯಲ್ಲಿ ಇರುತ್ತಿದ್ದ ಅನಂತ ಮಾಸ್ತರರ ಫ್ಯಾಮಿಲಿಗೆ ಇವರ ಮನೆಯಲ್ಲಿ ಆಗಾಗ ಮಾಡುತ್ತಿದ್ದ ಮಾಂಸದ ಅಡುಗೆ ಕಿರ್ಕಿರಿ ಮಾಡಿದರೆ ಪಕ್ಕದ, ಈಚೆ ಕಡೆಯ ಎರಡೂ ಮನೆಗಳವರಿಗೆ ಯಜಮಾನನ ಭರಿಸಲಾಗದ ಕುಡಿತ ಸುಸ್ತು ಮಾಡುತ್ತಿತ್ತು.
ಆದರೆ ಅವೆಲ್ಲಾ ಅನಿವಾರ್ಯತೆಗಳ ಮಧ್ಯೆ ಮುಖ ದಪ್ಪಗೆ ಮಾಡಿಕೊಂಡೇ ಜೀವಿಸುತ್ತಿದ್ದ ಹದಿನಾರು ಜನರ ವಠಾರದಲ್ಲಿ ಹದಿನಾರು ದಿಕ್ಕುಗಳಿವೆ ಎನ್ನುವಂತೆ ಭಾಸವಾಗುತ್ತಿತ್ತು. ಬಂದ ಹದಿನೈದು ದಿನ ಕಳೆಯುವಷ್ಟರಲ್ಲಿ ಎಲ್ಲ ಮನೆಯವರು ಒಂದು ದಾರಿಗೆ ಬರುವಂತೆ ಹದ ಹೊಡೆದಿದ್ದೆ. ಮಾಸ್ತರರಿಗೆ ಮಾಂಸದ ವಾಸನೆ ಭರಿಸತೊಡಗಿದರೆ, ರಾತ್ರೋ ರಾತ್ರಿ ಕುಡಿಯುವ ಯಜಮಾನ ನಮಗೇನೂ ತೊಂದರೆ ಇಲ್ಲ ಎನ್ನಿಸಿ ಹಗಲಿನಲ್ಲಿ ಎದ್ದು ನಮಸ್ಕರಿಸತೊಡಗಿದ್ದರು. ಪಕ್ಕದ ಮನೆಯ ಮಕ್ಕಳು ಎಲ್ಲಾ ರೂಮು ತಮ್ಮವೇ ಎಂಬಂತೆ ಬಾಗಿಲು ಹೊಕ್ಕು ಬರತೊಡಗಿದ್ದವು. ಇದೆಲ್ಲದರ ಪರಿಣಾಮ ನನ್ನ ಊಟ ಉಪಚಾರಗಳು ಎಲ್ಲರ ಮನೆಯಲ್ಲೂ ಪಾಲಾಗತೊಡಗಿದವು. ಅಪ್ಪಟ ಗು೦ಡು ಗೋವಿಯಾಗಿದ್ದ ನಾನು ಫ್ಯಾಕ್ಟ್ರಿಯಿಂದ ಸಂಜೆ ಬೇಗ ಬಂದರೆ ಎಲ್ಲರನ್ನು ಕಟ್ಟಿಕೊಂಡು ಇದ್ದ ಚಿಕ್ಕ ಅಂಗಳದಲ್ಲಿ ಆಟಕ್ಕಿಳಿಯುತ್ತಿದ್ದೆ. ಆಗ ಈಗೀನಂತೆ ಟಿ.ವಿ. ನೋಡಲೇಬೇಕೆಂಬ ಹುಕಿಗಳು, ತರಹೇವಾರಿ ಸೀರಿಯಲ್ಲು ಇರಲಿಲ್ಲ. ಟಿ.ವಿ.ಯಂತೂ ಮೊದಲೇ ಇರಲಿಲ್ಲ ಓನರ್ ಮನೆಯಲ್ಲಿ ಬಿಟ್ಟರೆ.
ಹಾಗಾಗಿ ಕತ್ತಲಾಗುತ್ತಿದ್ದಂತೆ ತಣ್ಣಿರು ತುಂಬಿಕೊಂಡು ನಾನು ಸ್ನಾನಕ್ಕೆ ಬಿದ್ದು, ಊಟಕ್ಕೆ ಹೊರಡಲು ಸೈಕಲ್ಲು ಹತ್ತುತ್ತಿದ್ದರೆ ಅನಂತ ಮಾಸ್ತರೋ, ಪಕ್ಕದ ವನಜಾ ಮಾಮಿನೋ " ಏಯ್ ಕುಟ ಜಾತೋರೇ, ಇಕಡಚ್ ಏ ಜೇವಣ್ಲಾ.." ಎನ್ನುತ್ತಾ ಕೂಗುತ್ತಿದ್ದರು. ಸೈಕಲ್ಲು ದಿನದಿಂದ ದಿನಕ್ಕೆ ಮೂಲೆಗೆ ಬೀಳತೊಡಗಿತು. ಆದರೆ ವನಜಾ ಮಾಮಿಗೆ ನಾನು ರೂಮಿಗೆ ಸೇರಿದಾಗಿನಿಂದ ಅದೇನೋ ಅಸಹನೆ, ನಾನು ಅಲ್ಲಿಗೆ ಕಾಲಿಟ್ಟಾಗಿನಿಂದಲೂ ಉಂಟಾಗಿದ್ದು ಹೌದು. ನನ್ನ ವನವಾಸ ಕಡಿಮೆಯಾಗಿ ಓನರ್ ಮನೆಯಲ್ಲಿ ಠಿಕಾಣಿ ಜಾಸ್ತಿ ಆಗತೊಡಗಿತ್ತು. ಊಟ, ಬೆಳಿಗ್ಗೆ ಚಾ, ಸಂಜೆಗೆ " ಮೀಸಳ ಅಣಿ ಮಿರ್ಚಿ" ಎಲ್ಲಿದ್ದರೂ ಮೂಗರಳಿಸಿಕೊಂಡು ಬಂದುಬಿಡುತ್ತಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ನನಗೇ ಗೊತ್ತಿಲ್ಲದಂತೆ ಮನೆಯ ಒಡತಿ ಇನ್ನು ಮೂವತ್ತೂ ತುಂಬದ ಹೆಂಗಸಿನ ಆಕರ್ಷಣೆಗೆ ಬಿದ್ದಿದ್ದೇನಾ..? ಆರಂಭದಲ್ಲಿ ಗೊತ್ತಾಗಿರಲಿಲ್ಲ.
ಅದರೆ ಕ್ರಮೇಣ ಅವಳೊಂದಿಗೆ ಕುಳಿತುಕೊಂಡು ಟಿ.ವಿ.ನೋಡಿ, ಆಗೀಗ ಕಾಯಿಪಲ್ಯೆ ತಂದುಕೊಂಡು ಅಡಿಗೆಗಿಳಿಯುವುದೂ ಸೇರಿದಂತೆ ಉಳಿದ ಮನೆಗಳವರು ಊಟಕ್ಕಿಕ್ಕಿದರೆ " ವೈನಿ ಊಟಕ್ಕ್ ಕರ‍್ದಾರು, ಮಾಮಿ ಅಲ್ಲೇ ಹೊಕ್ಕೇನಿ " ಎಂದು ಎದ್ಡು ಬರತೊಡಗಿದ್ದೆ. ಹೀಗಾಗುವುದಕ್ಕಿಂತಲೂ ಒಂದು ರೀತಿಯ ಸಣ್ಣನೆಯ ದೃಷ್ಠಿಯ ಸಮರ ನಮ್ಮ ವಠಾರದಲ್ಲಿ ಆರಂಭವಾಗತೊಡಗಿತ್ತು. ಜೊತೆಗೆ ಆಗೀಗ ಒಂದೇ ಒಂದು ಸ್ಕೂಟರನಲ್ಲಿ ನಾನು ಅವಳೊಂದಿಗೆ ಬೆಳಗಾವಿಯ ರಸ್ತೆಗಳನ್ನು ಧೂಳೆಬ್ಬಿಸಿ ಬರಲಾರಂಭಿಸಿದ್ದೆ. ಏನೂ ಕೆಲಸ ಇಲ್ಲದಿದ್ದರೂ " ಅಲ್ಲಿ ತಂಕಾ ಓಡಸೂ... " ಎನ್ನುತ್ತಾ ಗಾಳಿಗೆ ಸೆರಗು ಹಾರಿಸುತ್ತಾ ಹೆಗಲು ಬಳಸಿ ಕುಳಿತು ಬಿಡುತ್ತಿದ್ದಳು. ನನಗೆ ಒಲ್ಲದ ಸ್ಕೂಟರಿಗೂ ಕುದುರೆ ವೇಗ. ಅವಳಷ್ಟು ಹತ್ತಿರವಾಗಲೂ ಕಾರಣವಿತ್ತು. ವಠಾರ ಒ೦ದುಗೂಡುತ್ತಿದ್ದಂತೆ ಇದ್ದಕ್ಕಿದ್ದಂತೆ ಒಂದಿನ ಯಜಮಾನ ಒಂದೂವರೆ ಕ್ವಾಟರ್ ತೆಗೆದುಕೊಂಡು ನನ್ನ ರೂಮಿಗೆ ಬಂದು ಬಿಟ್ಟು ಎರಡು ಸ್ಟೀಲಿನ ಗ್ಲಾಸಿಗೆ ಬಗ್ಗಿಸಿ ಕುಳಿತುಬಿಟ್ಟಿದ್ದಾನೆ. ಆಗೀನ್ನು ನಾನು ತೀರ ಹೊಸಬ.
ಕುಡಿಯುತ್ತಿರಲಿಲ್ಲವೆಂದಲ್ಲ. ಆದರೆ ಈ ಪರಿ ಡ್ರಮ್ಮಿನಂತಾಗಿ ಹೋಗಿರಲಿಲ್ಲ. ಅದರಲ್ಲೂ ಬಂದು ಇನ್ನು ತಿಂಗಳೂ ಕಳೆದಿರಲಿಲ್ಲ. ಕೂಡಲೇ ಕೆಳಗೆ ಹೋಗಿ ಅವಳನ್ನು ಕರೆದು ನಿಮ್ಮ ಯಜಮಾನರಿಗೆ ಕುಡಿಯುವ ಹುಕಿ ಇದ್ದರೆ ನಿಮ್ಮನೇಲಿ ಕುಡಿಲಿ. ನನ್ನ ರೂಮನ್ನೆಲ್ಲಾ ಕ್ಲಬ್ಬು ಮಾಡುವುದು ಬೇಡ ಎಂದಿದ್ದೆ. ಆಕೆಗೆ ಅವಮಾನವಾದರೂ ನನ್ನ ವರಸೆ ಸಮಾಧಾನ ನೀಡಿತ್ತು. ಹೀಗಾಗಿ ಉಳಿದವರಿಗಿಂತಲೂ ನಾನೆಂದರೆ ಅದೇನೋ ಸದರ, ಅಭಿಮಾನ ಎರಡೂ ಇದ್ದವಾ..? ಗೊತ್ತಿಲ್ಲ. ಅನಂತ ಮಾಸ್ತರು, ಪಕ್ಕದ ಮನೆಯ ವನಜಾ ಮಾಮಿ ಅವರ ಮಕ್ಕಳು ಎಲ್ಲಾ ನನ್ನನೊಂದು ಥರಾ ನೋಡುತ್ತಿದ್ದುದು, ಒಂದಿನ ನಾನು ರಾತ್ರೆವರೆಗೂ ಅವಳ ಕಣ್ಣಿಗೆ ಬಿದ್ದಿಲ್ಲವಾದರೆ ಚಡಪಡಿಸಿ ಹೋಗುತ್ತಿದ್ಡುದು ನನ್ನ ಗಮನಕ್ಕೆ ಬಂದಿತ್ತು. ತೀರ ಇನ್ನು ಸರಿಯಾಗಿ ಮೀಸೆಯೂ ಬಲಿಯದ ಪಡ್ಡೆಯಂತಿದ್ದೆ ನಾನು. ಆದರೆ ಮೊದಲಿನಿಂದ ಬಂದಿದ್ದ ಅದೊಂದು ರೀತಿಯ ಹುಂಬ ಧೈರ್ಯ ಎಲ್ಲವನ್ನು ಸಾಧಿಸುತ್ತಿತ್ತು. ತೀರ ತಡೆಯದೇ ಆಕೆ ರೂಮಿಗೇ ಹುಡುಕಿಕೊಂಡು ಬರುತ್ತಿದ್ದಳು. ನಾನು ನಾಲ್ವತ್ತು ವ್ಯಾಟಿನ ಬಲ್ಬಿನಲ್ಲಿ ಡೈರಿ ಬರೆಯುತ್ತಲೋ, ಪ್ರಕಟವಾಗದ ಕಥೆ ಹೆಂಗೆ ತೀಡುವುದು ಎನ್ನುವ ಹತಾಶ ಭಾವದಲ್ಲಿ ಕುಳಿತಿದ್ದರೆ ಆಕೆ ಬಂದು ವಸಂತ ಮೂಡಿಸಲಾರಂಭಿಸುತ್ತಿದ್ದಳು. ಹಾಗೇ ದಿನಗಳು ಕಳೆದರೂ ಓನರ್ರು ನನ್ನನ್ನೆಂದೂ ಸಂಶಯಿಸಲಿಲ್ಲ. ಎಂದಿನಂತೆ ಬೆಳಿಗ್ಗೆ ಎಬ್ಬಿಸಿ ನೀರು ಬಂತೆಂದು ಬಾಗಿಲು ಕುಟ್ಟಿ ಹೋಗುತ್ತಿದ್ದ.
ಆದರೆ ಸುಖಾ ಸುಮ್ಮನೆ ಒಂದಿನ " ನೀ ಎಲ್ಲೆರ ಬ್ಯಾರೆ ರೂಂ ನೋಡು ಇಲ್ಲಂದ್ರ ನಾನ ನೋಡಿ ಕೊಡ್ತೇನಿ..." ಅನ್ನತೊಡಗಿದ. ಆ ದಿನ ಆಕೆ ರಾತ್ರಿಯಿಡಿ ಅತ್ತಿದ್ದಳಾ ಗೊತ್ತಿಲ್ಲ. ಸಂಜೆ ಬಂದಾಗ ಕಣ್ಣು ರಮ್ಮಿಗಿಂತಲೂ ಕೆಂಪಾಗಿದ್ದವು. " ನೀ ಏನ ರೂಂ ಬಿಟ್ಟ ಹೋಗಬ್ಯಾಡ. ಆಂವ ಏನೂ ಅನ್ನಾಂಗಿಲ್ಲ..." ಎನ್ನುತ್ತಾ ಕೆನ್ನೆ ಹಿಂಡಿ ಸಮಾಧಾನಿಸಿದ್ದಳು. ನಾನು ಸುಮ್ಮನೇ ಕುಳಿತೇ ಇದ್ದೆ. " ...ನಡಿ ಸ್ನಾನ ಮಾಡಿ ಬಾ ಊಟಕ್ಕಿಡ್ತೇನಿ... " ಎನ್ನುತ್ತಾ ಕೆನೆ ಸವರಿ ಎದ್ಡು ಹೋದಳು. ಅಂದು ರಾತ್ರಿ ತುಂಬಾ ಖುಷಿಯಾಗಿತ್ತು. ನಾನು ಅಲ್ಲಿಂದ ತಟ್ಟೆ ತಂದುಕೊಂಡು ನನ್ನ ರೂಮಿಗೇ ಬಂದು ಅರ್ಧ ಊಟ ಮಾಡಿದ್ದೆ. ಚಿಕ್ಕ ಬಟ್ಟಲು ಸ್ವೀಟ್ ತಂದುಕೊಟ್ಟು ಪ್ರೀತಿಯಿಂದ ಮುದ್ದಿಸಿ ಹೋಗಿದ್ದಳು. ಯಥಾ ಪ್ರಕಾರ ನನ್ನ ಕೆನ್ನೆಗಳು ಬಿಸಿಯಾದವು.
ಕೊನೆಯ ತುತ್ತಿನ ಹೊತ್ತಿಗೆ ಓನರೂ ಬಂದು ಜೊತೆಯಾದ. ಮುಂದೇನಾಗುತ್ತಿದ್ದವೋ ಅದೆಲ್ಲಿಗೆ ಹೋಗಿ ನಮ್ಮ ಸಂಬಂಧ ಮುಟ್ಟುತ್ತಿದ್ದವೋ ಗೊತ್ತಿಲ್ಲ. ಆದರೆ ಮರುದಿನ ವಿನಾಕಾರಣ ಜಗಳಕ್ಕೆ ಸಿಕ್ಕು "ಜೈ ಹಿಂದ್" ಇ೦ಡ್ಮಸ್ಟ್ರೀಗೆ ರಾಜೀನಾಮೆ ಬಿಸಾಡಿ ಎದ್ಡು ಬಂದಿದ್ದೆ. ಎರಡನೆಯ ಬಾರಿಗೆ ಬೆಳಾಗಾವಿಯ ಋಣ ತೀರಿತ್ತು. ಮರುದಿನ ರೂಮು ಬಿಡುತ್ತೇನೆಂದು ಹೇಳಿಬಂದೆ. ರಾತ್ರೆ ಇದ್ದಕ್ಕಿದ್ದಂತೆ ರೂಮಿಗೆ ಬಂದವಳು ತೆಕ್ಕೆ ಬಿದ್ದು ಅಳತೊಡಗಿದವಳಿಗೆ ಸಾಂತ್ವನ ಹೇಗೆ ಹೇಳುವುದೂ ಗೊತ್ತಾಗದೆ ನಿಂತಿದ್ದೆ. ಕಾಲ ಕಾಯಲಿಲ್ಲ. ವಠಾರ ಬರಿದಾಗಿತ್ತು. ವನಜಾ ಮಾಮಿ ಗೆಲುವಿನ ನಗೆ ಬೀರಿದ್ದಳು. ಕೊನೆಯ ಕ್ಷಣದಲ್ಲಿ ಗೊತ್ತಾದ ಸತ್ಯ ಅದು. ಆಗೀಗ ಯಜಮಾನ ಆ ರೂಮನ್ನು ಮಾಮಿಗಾಗಿ ಬಳಸಿಕೊಳ್ಳುತ್ತಿದ್ದ. ಬಹುಶ: ನಮಗೂ ಅದೇ ರೀತಿಯಲ್ಲಿ ಬಳಕೆಯಾಗುತ್ತಿತ್ತಾ ಗೊತ್ತಿಲ್ಲ. ಆದರೆ ಓನರ್ರು ಯಾಕೆ ನನ್ನೆಬ್ಬಿಸಲು ಪ್ರಯತ್ನಿಸುತ್ತಿದ್ದ...?
ಒಂದು ವನಜಾಮಾಮಿಯ ಸಾಂಗತ್ಯಕ್ಕೆ ಅಡ್ಡಿಯಾಗುತ್ತಿದುದಕ್ಕಾ ಅಥವಾ ಎಲ್ಲಿ ತನ್ನ ಹೆಂಡತಿ ತನ್ನಂತೆ ಇನ್ನೊಬ್ಬನ ತೆಕ್ಕೆಗೆ ಹೋದಾಳು ಎಂದಾ...? ಈಗಲೂ ಗೊತ್ತಾಗಿಲ್ಲ. ಆದರೆ ಗಂಡನ ಹಾದರತನ ಬಿಡಿಸಲು ಆ ರೂಮಿನಲ್ಲಿ ನನ್ನ ಉಳಿಯುವಂತೆ ಮಾಡಲು, ಗುರಾಣಿಯಾಗಿಸಲು, ಆ ಮೂಲಕ ಸಣ್ಣ ಸಾಂತ್ವನ ಬಯಸಿದ ಆಕೆಯ ಪರಿಸ್ಥಿತಿಗೆ ಮಾತ್ರ ಇವತ್ತಿಗೂ ಮನಸ್ಸು ದ್ರವಿಸಿಹೋಗುತ್ತದೆ. ಅದಕ್ಕೆ ಬಹುಶ: ನಮ್ಮ ಹೆಣ್ಣು ಮಕ್ಕಳು ಇವತ್ತಿಗೂ ಒಂದು ಕೈ ಮೇಲಿದ್ದಾರೆ ಅನ್ನಿಸುತ್ತದೆ. ಯೋಚಿಸುವ ಮೊದಲೇ ನೆಲೆ ಕಳೆದುಕೊಂಡು ಮತ್ತೇ ಫುಟ್ ಪಾತಿಗೆ ಬಿದ್ದಿದ್ದೆ. ಈ ಬಾರಿ ನನ್ನ ಎತ್ತಿಕೊಂಡದ್ದು ರಸ್ತೆಯಲ್ಲ... ಮಧ್ಯಂತರದ ಸ್ಟಾಫ್‌ಗ್ಯಾಪ್ ಎ೦ಬಂತೆ ಇನ್ನೊಂದು ನೌಕರಿ ಅದು ಮುಂದಿನ ಸಲಕ್ಕೆ

Re: ಅವಳಿಗೆ ನಾನು ಬೇಕಾಗಿತ್ತು... ಆದರೆ ಅವನಿಗೆ...?
ಸಾರ್ ನೀವು ಸ್ತ್ರೀಯರ ಮೇಲೆ ಇಟ್ಟಿರುವ ಗೌರವ ನನಗೆ ತುಂಬಾ ಇಷ್ಟವಾಯಿತು ......
Re: ಅವಳಿಗೆ ನಾನು ಬೇಕಾಗಿತ್ತು... ಆದರೆ ಅವನಿಗೆ...?
ಹೋಯ್ ಇದು ಪೂರ್ತಿ ರವಿ ಬೆಳಗೆರೆ ಸ್ಟೈಲು ಮಾರಾಯ್ರೇ... ಮಿಮಿಕ್ರಿ ದಯಾನಂದ್ ಅಣ್ಣಾವ್ರ ಅನುಕರಣೆ ಮಾಡಿದ ಹಾಗಿದೆ...
Re: ಅವಳಿಗೆ ನಾನು ಬೇಕಾಗಿತ್ತು... ಆದರೆ ಅವನಿಗೆ...?
+1
Re: ಅವಳಿಗೆ ನಾನು ಬೇಕಾಗಿತ್ತು... ಆದರೆ ಅವನಿಗೆ...?
ನಿಮ್ಮ ಅನಿಸಿಕೆ ತಿಳಿಸಿ