ತಲೆಬುಡವಿಲ್ಲದ್ದು

ಬರೆದವರು: ಸುಪ್ತವರ್ಣ - ಕಳುಹಿಸಿದ ದಿನ 13 February 2010

ದು ನಿನ್ನೆ ಬೆಳಿಗ್ಗೆ ನಡೆದಿದ್ದು.ಸರಕಾರದವರು ಹೊಸದಾಗಿ ಮಾಡಿರುವ ರಸ್ತೆ. ಹೊಸ ರಸ್ತೆಗಳು ಅಪರೂಪವಾದ್ದರಿಂದ ಜನ ಸ್ವಲ್ಪ ವೇಗವಾಗಿಯೇ ಚಲಿಸುತ್ತಾರೆ. ಅದು ಗೊತ್ತಿರುವುದರಿಂದಲೇ, ಸರಿಯಾಗಿ, ತಿರುವು ಇರುವ ಕಡೆ ಒಂದು 'ಹಂಪ್' ಇಟ್ಟಿದ್ದಾರೆ. ಅದು ಇರುವ ಜಾಗದಲ್ಲಿಯೇ ಇವತ್ತು ಕಾಲು ಸ್ವಲ್ಪ ಊನವಿರುವ ವ್ಯಕ್ತಿಯೊಬ್ಬ 'ಲಿಫ್ಟ್' ಗಾಗಿ ಕೈ ತೋರಿಸುತ್ತ ನಿಂತಿರುವುದು ಕಾಣಿಸಿತು. ಹಿಂದೆ ನಾನು ಬೈಕ್ ಓಡಿಸುತ್ತಿದ್ದಾಗ ಹೀಗೆ ಲಿಫ್ಟ್ ಕೇಳುತ್ತಿದ್ದ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದೆ. ಅದರಲ್ಲೂ ಎಷ್ಟೋ ಸಿವಿಲ್ ಮತ್ತು ಟ್ರಾಫಿಕ್ ಪೋಲೀಸರಿಗೆ ಸಾಕಷ್ಟು ಬಾರಿ ಲಿಫ್ಟ್ ಕೊಟ್ಟಿದ್ದೇನೆ. ಆಮೇಲಾಮೇಲೆ ಪೇಪರಿನಲ್ಲಿ ಬರುತ್ತಿದ್ದ ಕೆಟ್ಟ ಸುದ್ದಿಗಳನ್ನು ಓದಿ ಲಿಫ್ಟ್ ಕೊಡುವುದನ್ನು ನಿಲ್ಲಿಸಿದೆ. ಅದರಲ್ಲೂ ಕಾರು ತೆಗೆದುಕೊಂಡ ಮೇಲೆ ಪೂರ್ತಿ ನಿಲ್ಲಿಸಿದ್ದೇನೆ. ಆಗಂತುಕರನ್ನು ಮನೆಯಲ್ಲಿ ಬಿಟ್ಟುಕೊಳ್ಳುವುದಕ್ಕೂ, ಕಾರಿನಲ್ಲಿ ಬಿಟ್ಟುಕೊಳ್ಳುವುದಕ್ಕೂ ಅಂತ ವ್ಯತ್ಯಾಸವಿಲ್ಲವೆಂದು ನನ್ನ ಅಭಿಪ್ರಾಯ.


ಯಾವ ಕ್ಷಣದಲ್ಲಿ ಏನು ಯೋಚಿಸಿ ಯಾಮಾರಿದೆನೋ ಈಗ ನೆನಪಿಲ್ಲ. ಬಹುಶಃ ಆತ ಅಂಗವಿಕಲನಾದ್ದರಿಂದ ಇರಬಹುದು. ಹತ್ತಿರವಾಗುತ್ತಿದ್ದಂತೆ ಕಾರು ನಿಲ್ಲಿಸಿ, ಎಡಗಡೆಯ ಬಾಗಿಲು ತೆರೆದು, "ಎಲ್ಲಿಗೆ ಹೋಗಬೇಕು?" ಎಂದೆ.ಅದು ಕೇಳಿಸಲಿಲ್ಲವೇನೋ, "ಕನ್ನಡ ಬರುತ್ತಾ ಸಾರ್?" ಎಂದು ನನ್ನನ್ನು ಕೇಳಿದ."ಹೌದು, ಹೇಳಿ", ಎಂದೆ."ನನಗೆ ಲಿಫ್ಟ್ ಬೇಡ ಸಾರ್, ತುಂಬಾ ತೊಂದರೆಯಲ್ಲಿದ್ದೇನೆ, ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ. ನನಗೆ ಸ್ವಲ್ಪ ಸಹಾಯ ಬೇಕಿತ್ತು", ಎಂದ.ನಾನು ಅನುಮಾನದಿಂದಲೇ, "ಏನು ಸಹಾಯ ಬೇಕು?", ಎಂದೆ.ಆತ ಮತ್ತೆ ತನ್ನ ಹಿಂದಿನ ವಾಕ್ಯದಿಂದಲೇ ಶುರುಮಾಡಿದ, "ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ ಸಾರ್. ತುಂಬಾ ಹಣಕಾಸಿನ ತೊಂದರೆಯಲ್ಲಿದ್ದೇನೆ. ಮಗನ ವಿದ್ಯಾಭ್ಯಾಸ ಇತರೆ ತೊಂದರೆಗಳಿವೆ. ಫೀಸೂ ಕಟ್ಟಿಲ್ಲ, ತಮ್ಮ ಕೈಲಾದ ಸಹಾಯ ಮಾಡಿದ್ದರೆ ಚೆನ್ನಾಗಿತ್ತು. ಮತ್ತೆ.....ನಾನು ಭಿಕ್ಷೆ ಬೇಡುತ್ತಿಲ್ಲ ಸಾರ್", ಎಂದ.


ಲಿಫ್ಟ್ ಕೊಡಲು ಹಾಗೂ ಹೀಗೂ ಮಾನಸಿಕವಾಗಿ ತಯಾರಿದ್ದ ನಾನು ಈ ಹೊಸ ಬೇಡಿಕೆಗೆ ಕೊಂಚ ಗಾಬರಿಯಾದೆ. ಯಾರೋ ಏನೋ ಗೊತ್ತಿಲ್ಲ. ನನಗೆ ಅವನಲ್ಲಿ ನಂಬಿಕೆಯೂ ಹುಟ್ಟಲಿಲ್ಲ. ಹಾಗೆಂದು ಆತ ಲಫಂಗನಂತೆಯೂ ಕಾಣಿಸಲಿಲ್ಲ. ಅದೇ ಗೊಂದಲದಲ್ಲಿಯೇ, "sorry" ಎಂದು ಬಾಗಿಲೆಳೆದುಕೊಂಡೆ. ಆ ಕ್ಷಣದ ಮಟ್ಟಿಗೆ ನಾನು ವಿಚಾರ ಮಾಡಿದ್ದು ಅಷ್ಟೇ. ನಾನು ಬಾಗಿಲು ಮುಚ್ಚುವ ಮೊದಲು ಆತ, "ದೇವರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ, ಆತನಿದ್ದಾನೆ ಹೋಗಿ", ಎಂದದ್ದು ಕೇಳಿಸಿತು.ನಾನು ದೇವರನ್ನು ನಂಬುವುದಿಲ್ಲ. ಆದ್ದರಿಂದ ಭಕ್ತರು ಹಾಕುವ ಶಾಪ ನನ್ನನ್ನು ತಟ್ಟುವುದಿಲ್ಲ. ಹಾಗೆಂದು ಆತ ಕೊನೆಯಲ್ಲಿ ಅಂದ ಮಾತು ಮಾತ್ರ ನನ್ನನ್ನು ತಟ್ಟದೇ ಹೋಗಲಿಲ್ಲ.


ಅಲ್ಲಿಂದ ಹೊರಡುತ್ತ ಕಾರಿನ ಮಿರರಿನಲ್ಲಿ ಆತನನ್ನು ನೋಡಿದೆ. ಆತ ಕುಸಿದು ಕುಳಿತಿದ್ದು ಕಾಣಿಸಿತು. ನನಗೆ ಅಯ್ಯೋ ಅನಿಸಿತು. ಯಾರಿಗೆ ಗೊತ್ತು? ನಿಜವಾಗಿಯೂ ತೊಂದರೆಯಲ್ಲಿರುವವನಾದರೆ? ಅದೇ ಹತಾಶೆಯಲ್ಲಿ ಏನಾದರೂ ಮಾಡಿಕೊಂಡರೆ? ಆಗ ಆತನ ಮಗನ ವಿದ್ಯಾಭ್ಯಾಸದ ಗತಿಯೇನು? ಆತನಿಗೆ ಇನ್ನೇನೇನು ತೊಂದರೆಗಳಿವೆಯೋ? ಯೋಚಿಸುತ್ತಿದ್ದಂತೆ ಯಾಕೋ ನಾನು ಮಾಡಿದ್ದು ಸ್ವಲ್ಪ ಕ್ರೂರವಾಯಿತು ಅನಿಸತೊಡಗಿತು. ಸ್ವಲ್ಪ ಮುಂದೆ ಬಂದು ಡಿವೈಡರ್ ಪಟ್ಟಿ ಮುಗಿಯುತ್ತಿದ್ದಂತೆ, 'U' ಟರ್ನ್ ತೆಗೆದುಕೊಂಡೆ. ಮತ್ತೆ ಆತನಿರುವ ದಿಕ್ಕಿಗೇ ಚಲಿಸತೊಡಗಿದೆ. ಆತ ನಿಂತಿರುವ ಜಾಗದಲ್ಲಿ ರಸ್ತೆ ಇಕ್ಕಟ್ಟಾಗಿರುವುದರಿಂದ ಅಲ್ಲಿ ಕಾರನ್ನು ತಿರುಗಿಸಲು ಸಾಧ್ಯವಿಲ್ಲದೆ, ಇನ್ನೂ ಸ್ವಲ್ಪ ಮುಂದೆ ಬಂದು ಮತ್ತೊಮ್ಮೆ 'U' ಟರ್ನ್ ತೆಗೆದುಕೊಂಡು ಕಾರು ನಿಲ್ಲಿಸಿಕೊಂಡೆ.


ಕಾರಿನಲ್ಲಿರುವ ಪೆನ್ನು ಮತ್ತು ಪೇಪರನ್ನು ಹೊರತೆಗೆದೆ. ಪೇಪರ್ ಇಟ್ಟುಕೊಳ್ಳಲು ಏನಾದರೂ ಬೇಕಲ್ಲ? ಹಳೇ CD ಕವರನ್ನು ಹೊರತೆಗೆದೆ. ಮತ್ತೆ ಆತನಿದ್ದಲ್ಲಿಗೇ ಬಂದೆ.'ಇವನು ಮತ್ತೆ ಯಾಕಪ್ಪ ಬಂದ?' ಎಂದು ಗೊಣಗಿದ್ದು ಆತನ ತುಟಿ ಚಲನೆಯಿಂದ ನನಗೆ ಕಾಣಿಸಿತು (ಅಥವಾ ನನಗೆ ಹಾಗನ್ನಿಸಿತು)ಕಾರು ನಿಲ್ಲಿಸುತ್ತಿದ್ದಂತೆ ಅವನೇ ಎಡಗಡೆಯ ಬಾಗಿಲು ತೆರೆದ. ನಾನು ಅವನೆಡೆಗೆ ಪೇಪರ್ ಮತ್ತು ಪೆನ್ನನ್ನು ಚಾಚಿ, "ನೋಡಿ ಸಾರ್, ನಿಮ್ಮ ಅಡ್ರೆಸ್ ಕೊಡಿ, ನಿಮ್ಮ ತೊಂದರೆಯ ಬಗ್ಗೆ ನಂತರ ನಿಮ್ಮನ್ನು ಕಾಣುತ್ತೇನೆ" ಎಂದೆ.ಆತ ಸಿಟ್ಟಿನಲ್ಲಿದ್ದ, "ಬಿಡಿ ಸಾರ್, ನಾನು ಮೋಸಗಾರ, ವಂಚಕ. ನೀವೇನೂ ಸಹಾಯ ಮಾಡಬೇಕಿಲ್ಲ, ನನ್ನ ಕಷ್ಟ ನಾನು ನೋಡಿಕೊಳ್ಳುತ್ತೇನೆ. ನೀವು ಹೊರಡಿ", ಎಂದ."ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಬೆಂಗಳೂರಿನಲ್ಲಿ ಎಂತೆಂಥವರಿದ್ದಾರೆ ಎಂದು ನಿಮಗೂ ಗೊತ್ತು. ಹಾಗಾಗಿ ಒಂದು ಕ್ಷಣ ಬೇರೆ ವಿಚಾರ ಮಾಡಿದೆ. ತಪ್ಪು ತಿಳಿಯಬೇಡಿ, ನಿಮ್ಮ ಕಷ್ಟಕ್ಕೆ ಖಂಡಿತ ನಾನು ಸಹಾಯ ಮಾಡಬಲ್ಲೆ" ಎಂದೆ."ಏನೂ ಬೇಡ, ನನ್ನ ಕಷ್ಟ ನಾನೇ ನೋಡಿಕೊಳ್ಳುತ್ತೇನೆ, ನಿಮ್ಮ ಸಹಾಯ ಏನೂ ಬೇಡ", ಎಂದ.ಅವನೇಕೋ ವಿಳಾಸ ಕೊಡಲು ತಯಾರಿರಲಿಲ್ಲ.


ನಿಜಕ್ಕೂ ತೊಂದರೆಯಲ್ಲಿರುವವನಾದರೆ ವಿಳಾಸ ಕೊಟ್ಟರೇನು ತೊಂದರೆ? ಆತನ ಮಗನ ವಿದ್ಯಾಭ್ಯಾಸಕ್ಕೆ ನಾನು ಖಂಡಿತ ಸಹಾಯ ಮಾಡಬಲ್ಲೆ. ಪೂರ್ತಿ ನನ್ನಿಂದಾಗದಿದ್ದರೆ, ನನ್ನಂಥದೇ ಮನಸ್ಸಿನ ಇನ್ನೂ ಮೂರ್ನಾಲ್ಕು ಜನರನ್ನು ಖಂಡಿತ ನನ್ನೊಂದಿಗೆ ಸೇರಿಸಬಲ್ಲೆ. ಸಹಾಯ ನಾನು ಮಾಡುವವನಾದ್ದರಿಂದ ಆತ ಅಸಲಿಯೋ ನಕಲಿಯೋ ತಿಳಿದುಕೊಳ್ಳುವ ಹಕ್ಕಂತೂ ನನಗಿದ್ದೇ ಇದೆ. ಆತ ಅದಕ್ಕೂ ತಯಾರಿಲ್ಲದಿದ್ದರೆ ಹೇಗೆ?ನಾನು ಮತ್ತೆ , "ನೋಡಿ ಸಾರ್. ಬೆಂಗಳೂರು ನಿಮಗೆ ಗೊತ್ತಿದೆ. ಯಾರು ಅಸಲಿ ಯಾರು ನಕಲಿ ಎಂದು ನೋಡಿದ ಕೂಡಲೇ ತಿಳಿಯುವುದಿಲ್ಲ. ಅದಕ್ಕೇ ಸ್ವಲ್ಪ ವಿಚಾರಿಸಬೇಕಾಯಿತು. ನೀವು ಅಷ್ಟಕ್ಕೇ ಬೇಸರಿಸಿಕೊಂಡರೆ ಹೇಗೆ? ನೀವೇ ನನ್ನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದಿರಿ?" ಎಂದೆ.ಆತ ಕೋಪದಲ್ಲೇ, "ನಾನು ನನ್ನ ಜೀವವನ್ನೇ ಕೊಡುತ್ತಿದ್ದೆ, ನೀವು ನೋಡಿದರೆ ಜೇಬಿನಲ್ಲಿ ನೂರು ರೂಪಾಯಿಯೂ ಇಲ್ಲದವರಂತೆ ನನ್ನ ವಿಳಾಸ ಕೇಳುತ್ತಿದ್ದೀರಿ", ಎಂದ.ನನಗೆ ಜೋರಾಗಿ ನಗು ಬಂತು. ಜೀವ ಅಷ್ಟು ಅಗ್ಗವಾಯಿತೇ? ಇವನರ್ಥದಲ್ಲಿ ಸಹಾಯವೆಂದರೆ ನಾನೀಗ ತಕ್ಷಣಕ್ಕೆ ಕೊಡಬಹುದಾದ ಇನ್ನೂರೋ ಮುನ್ನೂರೋ ಹಣವೇ ಹೊರತು ತನ್ನ ವಿಳಾಸ ಕೊಟ್ಟು ಕಷ್ಟ ಬಗೆಹರಿಸಿಕೊಳ್ಳುವುದು ಅವನಿಗೆ ಬೇಕಿಲ್ಲ.


ನಾನು ನಗುತ್ತ, "ನಾನೇನೂ ಜೀವ ಗೀವ ಕೊಡುವುದಿಲ್ಲ. ನೀವು ಬಯಸಿದರೆ ನಿಮಗೆ ಸಹಾಯ ಮಾಡಬಲ್ಲೆ", ಎಂದು ಪೇಪರನ್ನು ಮತ್ತೆ ಅವನ ಮುಂದೆ ಹಿಡಿದೆ.ಆತ, "ಏನೂ ಬೇಕಿಲ್ಲ" ಎಂದ.ನಾನು, "ಸರಿ, ನಿಮ್ಮಿಷ್ಟ" ಎಂದು ಬಾಗಿಲೆಳೆದುಕೊಂಡೆ. ಆತ ಮತ್ತೆ ಶಾಪ ಹಾಕಿದ್ದು ಕೇಳಿಸಿತು.ಈ ಬಾರಿ ಅವನ ಶಾಪ ಕೇಳಿ ನನಗೆ ಏನೂ ಅನಿಸಲಿಲ್ಲ. ಎಂತೆಂಥ ಪಾಪಿಗಳನ್ನೇ ದೇವರು ತನ್ನ ಭಕ್ತರಿಗಿಂತಲೂ ಹೆಚ್ಚು ಸುಖವಾಗಿಟ್ಟಿರುವಾಗ, ನನ್ನಂತ ಒಬ್ಬ ಎಡಬಿಡಂಗಿಯ ಮೇಲೆ, ನಾನು ಇಷ್ಟು ಮಾಡಿದ ಮೇಲೂ ಸಿಟ್ಟಾದಾನೇ? ಬಿಡಿ, ಆದದ್ದಾಗುತ್ತದೆ.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3 (1 vote)
abhimaani's picture
ಮಂಗಳ, 16/02/2010 - 12:41 ರಂದು abhimaani (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ತಲೆಬುಡವಿಲ್ಲದ್ದು

nimma hindina lekhanagalannu odi idannu odidare idu kanditha ತಲೆಬುಡವಿಲ್ಲದ್ದು  antha anisutte..!!!

ಸತೀಶ ಎಮ್.ಬಿ's picture
ಸೋಮ, 15/02/2010 - 12:59 ರಂದು ಸತೀಶ ಎಮ್.ಬಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ತಲೆಬುಡವಿಲ್ಲದ್ದು

ನಮ್ಮ ಒಳ್ಳೆಯತನ ಕೆಲವೊಮ್ಮೆ ಈ ರೀತಿ ಸಂದಿಗ್ಧವೆನ್ನಬಹುದಾದ ಪರಿಸ್ಥಿತಿಗೆ ಎಳೆದುಬಿಡುತ್ತವೆ ಅಲ್ಲವೇ? ಒಳ್ಳೆಯ ಅನುಭವವನ್ನೇ ಬರೆದಿರುವಿರಿ. ಧನ್ಯವಾದಗಳು...

ಪ್ರಶಾಂತ. ಕೆ. ಆರ್.'s picture
ಸೋಮ, 15/02/2010 - 11:07 ರಂದು ಪ್ರಶಾಂತ. ಕೆ. ಆರ್. ಅವರು ಹೇಳುತ್ತಾರೆ
Re: ತಲೆಬುಡವಿಲ್ಲದ್ದು

ನೀವು ಮಾಡಿದ್ದು ಸರಿಯಾಗಿಯೇ ಇದೆ. ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಸಾಧ್ಯ ಇಲ್ಲ. ನೀವು ಸಹಾಯ ಮಾಡಲು ತಯಾರಿದ್ದರೂ ಆತ ವಿಳಾಸ ಕೊಡಲು ತಯಾರಿಲ್ಲ ಎಂದ ಮೇಲೆ ಅವನನ್ನು ನಂಬುವಂತಿಲ್ಲ. ಅವನು ಹಾಕಿದ ಶಾಪ ನಿಮಗೆ ತಟ್ಟುವುದಿಲ್ಲ ಬಿಡಿ.

ಹರಿಪ್ರಸಾದ್'s picture
ರವಿ, 14/02/2010 - 20:21 ರಂದು ಹರಿಪ್ರಸಾದ್ ಅವರು ಹೇಳುತ್ತಾರೆ
Re: ತಲೆಬುಡವಿಲ್ಲದ್ದು

ಸುಪ್ತವರ್ಣ ರವರೆ ಹಲವು ಸಮಯದ ಮೇಲೆ ನಿಮ್ಮ ಬರವಣೆಗೆ ನೋಡಿ ತುಂಬಾ ಸಂತೋಷವಯಿತ್ತು  ನಿಮ್ಮ ಕಥಾ ಲೇಖನಗಳನ್ನು ಒದುವುದರಲ್ಲಿ ನನಗೆ ತುಂಬಾ ಸಂತೋಷವಾಗುತ್ತದೆ ನಿಮ್ಮ ಕಥಾ ಲೇಖನ ಗಳಿಗೆ ಕಾಯುತ್ತಿರುವೆ

ಉಮಾಶಂಕರ ಬಿ.ಎಸ್'s picture
ಶನಿ, 13/02/2010 - 23:43 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ತಲೆಬುಡವಿಲ್ಲದ್ದು

ನಾನು ಸಹ ಇಂತಹ ಪ್ರಸಂಗಗಳನ್ನು ಅನುಭವಿಸಿದ್ದು ಉಂಟೂ. 'ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರಿಗೇನೂ ಬರವಿಲ್ಲ' ಅಲ್ಲವೇ ಸರ್!


ಬಹುಶಃ ಬಹಳ ದಿನಗಳ ನಂತರ ಬರೆಯುತ್ತಿದ್ದೀರ ಸರ್! ಇಷ್ಟು ದಿನ ಎಲ್ಲಿ ಮಾಯವಾಗಿದ್ದೀರಿ ಸರ್?

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 5 ಉತ್ತರ 14
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.