ಇಲ್ಲಿಯವರೆಗೂ ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ದ್ರವ್ಯ ಮತ್ತು ಅಖಂಡ, ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಎಂಬ ವಿಷಯಗಳನ್ನು ಕೂಡ ಅರಿತೆವು. ಇದನ್ನೇ ನಮ್ಮ ಋಷಿಗಳು ಪುರುಷ ಎಂದು ಕೂಡ ಹೆಸರಿಸಿರುವುದು. ಈಗ ಈ ಪರಮಾತ್ಮನ ಇನ್ನೊಂದು ಮುಖವಾದ ಪ್ರಕೃತಿಯನ್ನು ಅರಿಯುವ ಪ್ರಯತ್ನ ಮಾಡೋಣ. ಪ್ರಕೃತಿಯ ವಿವರಣೆಯನ್ನು ಶ್ರೀಕೃಷ್ಣನ ಮಾತುಗಳಲ್ಲೇ ಕೇಳೋಣ:
ಪ್ರಕೃತಿ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ |
ಭೂತಗ್ರಾಮಮಿಮಂ ಕೃತ್ಸ್ನಮ್ ಅವಶಂ ಪ್ರಕೃತೇರ್ವಶಾತ್ || (ಅ. 9 ಶ್ಲೋ. 8 )
ಈ ಶ್ಲೋಕದ ತಾತ್ಪರ್ಯ ಹೀಗಿದೆ – ನನ್ನದೇ ಆದ ಪ್ರಕೃತಿಯ ಮೂಲಕ ಈ ವಿಶ್ವದ ಸರ್ವಸ್ವವನ್ನೂ ಮತ್ತೆ ಮತ್ತೆ ಸೃಷ್ಟಿಸುತ್ತೇನೆ. ಈ ಸೃಷ್ಟಿಯ ಸಮಸ್ತವೂ ಪ್ರಕೃತಿಯ ಶಕ್ತಿಗೆ ಒಳಗಾಗಿರುತ್ತದೆ.
ಇಲ್ಲಿ ಮುಖ್ಯವಾಗಿ ಮೂರು ವಿಷಯಗಳ ಪರಿಚಯವಾಗುತ್ತದೆ. ಮೊದಲನೆಯದಾಗಿ ಪ್ರಕೃತಿ ಎನ್ನಿಸಿಕೊಳ್ಳುವ ಶಕ್ತಿ ಪರಮಾತ್ಮನಿಗೆ ಅಧೀನವಾದದ್ದು, ಅಥವಾ ಅದು ಪರಮಾತ್ಮನ ಒಂದು ಭಾಗ. ಪರಮಾತ್ಮನನ್ನು ಪುರುಷನನ್ನಾಗಿ ಗುರುತಿಸಿದ ನಮ್ಮ ಋಷಿಗಳು ಅವನ ಪ್ರಕೃತಿ ಎನ್ನುವ ಶಕ್ತಿಯನ್ನು ಸ್ತ್ರೀ ರೂಪದಲ್ಲಿ ಗುರುತಿಸಿದ್ದಾರೆ. ಮತ್ತು ಇವೆರಡೂ ರೂಪಗಳೂ ಪರಮಾತ್ಮನ ಎರಡು ಮುಖಗಳು ಎನ್ನುವ ಭಾವವನ್ನು ಅರ್ಧನಾರಿಶ್ವರನ ರೂಪದಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ.
ಎರಡನೆಯದಾಗಿ ಪರಮಾತ್ಮನು ತನ್ನ ಪ್ರಕೃತಿ ಎಂಬ ಶಕ್ತಿಯ ಸಹಾಯದಿಂದ ಈ ವ್ಯಕ್ತ ರೂಪದ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ. ಇಲ್ಲಿ ‘ಪುನಃ ಪುನಃ’ ಎಂಬುದರ ಅರ್ಥ ಮುಖ್ಯವಾದುದು. ಇದರ ಅರ್ಥ ಈ ಸೃಷ್ಟಿಯು ಕೇವಲ ಒಮ್ಮೆ ಉಂಟಾದುದಲ್ಲ. ಇದನ್ನು ಮತ್ತೆ ಮತ್ತೆ ಅನೇಕ ಬಾರಿ ಸೃಷ್ಟಿಸಲಾಗುತ್ತಿದೆ. ಅಂದರೆ ಒಮ್ಮೆ ಉಂಟಾದ ಸೃಷ್ಟಿಯನ್ನು ನಾಶ ಮಾಡಿ ಮತ್ತೆ ಅದನ್ನು ಪುನಃ ರ್ಸೃಷ್ಟಿಸಲಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿರುವ ಕಾರ್ಯ – ಅಂದರೆ ಸಮುದ್ರದ ಮೇಲಿನ ಅಲೆಗಳಂತೆ ಈ ಬ್ರಹ್ಮಾಂಡದಲ್ಲಿ ಎಲ್ಲವೂ ಸೃಷ್ಟಿಯಾಗಿ, ತಮ್ಮ ಅವಧಿ ಮುಗಿದ ನಂತರ ನಶಿಸಿ (ಪರಮಾತ್ಮನಲ್ಲಿ ಒಂದಾಗಿ), ಮತ್ತೆ ಸೃಷ್ಟಿಗೆ ಒಳಗಾಗುತ್ತವೆ.
ಮೂರನೆಯದಾಗಿ ಈ ಸೃಷ್ಟಿಯೆಲ್ಲವೂ ಪ್ರಕೃತಿಯ ಶಕ್ತಿಗೆ ಒಳಗಾಗಿರುತ್ತವೆ. ಅಂದರೆ ಇಲ್ಲಿನ ಹುಟ್ಟು, ಜೀವನ, ಸಾವು ಎಲ್ಲವೂ ಪ್ರಕೃತಿಧರ್ಮಕ್ಕನುಸಾರವಾಗಿ ನಡೆಯುವುದಲ್ಲದೇ ಸೃಷ್ಟಿಸಲ್ಪಟ್ಟ ಪಾತ್ರಗಳಿಗೆ ಈ ಪ್ರಕೃತಿ ಧರ್ಮವನ್ನು ಮೀರುವ ಶಕ್ತಿ ಇಲ್ಲ. ಇದರಿಂದ ತಿಳಿಯುವ ಇನ್ನೋಂದು ವಿಷಯವೇನೆಂದರೆ, ಅವ್ಯಕ್ತ ನಿರ್ಗುಣ ನಿರಾಕಾರ ಪರಮಾತ್ಮ ತನ್ನ ಶಕ್ತಿಯಾದ ಪ್ರಕೃತಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುತ್ತಾನೆ. ಆದರೆ, ತನ್ನ ಅಂಶವನ್ನು ತನ್ನ ಪ್ರಕೃತಿಯ ಶಕ್ತಿಯ ಮೂಲಕ ವ್ಯಕ್ತ ರೂಪದಲ್ಲಿ ಸೃಷ್ಟಿಸಿದಾಗ, ಆ ಅಂಶವು ಪ್ರಕೃತಿಯ ಶಕ್ತಿಯ ಅಧೀನದಲ್ಲಿರುತ್ತದೆ, ಆ ಸೃಷ್ಟಿ ಅಂತ್ಯವಾಗಿ ಆ ಪರಮಾತ್ಮನ ಅಂಶವು ಮತ್ತೆ ಮೂಲರೂಪದಲ್ಲಿ ಪರಮಾತ್ಮನನ್ನು ಸೇರುವವರೆಗೂ. ಉದಾಹರಣೆಗೆ, ನಮ್ಮ ದೇಹದ ಯಾವುದಾದರೂ ಭಾಗಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಆ ಭಾಗಕ್ಕೆ ತಕ್ಕ ಸಂವೇದನಾ ನಾಶಕವನ್ನು ಕೊಡುತ್ತಾರೆ. ಆಗ ವೈದ್ಯರು ಆ ಭಾಗಕ್ಕೆ ಎನೇ ಮಾಡಿದರೂ ಅದರ ನೋವು ನಮಗೆ ಕಾಣುವುದಿಲ್ಲ, ಆ ಭಾಗವನ್ನು ಚಾಕುವಿನಿಂದ ಕತ್ತರಿಸುವುದನ್ನು ನಾವು ನೋಡುತ್ತಿದ್ದರೂ ಕೂಡ! ಆ ಭಾಗದ ನರಗಳು ಪೂರ್ಣವಾಗಿ ಸಂವೇದನಾ ನಾಶಕದ ಹತೋಟಿಯಲ್ಲಿರುತ್ತವೆ. ಸ್ವಲ್ಪ ಸಮಯದ ನಂತರ, ಸಂವೇದನಾ ನಾಶಕದ ಶಕ್ತಿ ಕುಂಠಿತಗೊಂಡಾಗ ಮತ್ತೆ ನಮಗೆ ಆ ಭಾಗದ ಸ್ಪರ್ಶಜ್ಞಾನವುಂಟಾಗುತ್ತದೆ. ಆ ಭಾಗವು ನಮ್ಮ ಅಧೀನಕ್ಕೆ ಹಿಂತಿರುಗುತ್ತದೆ.
ಈ ಪ್ರಕೃತಿಯ ಸ್ವರೂಪವೇನು ಎಂಬುದನ್ನು ಈಗ ನೋಡೋಣ:
ಭೂಮಿರಾಪೋನಲೋ ವಾಯುಃ ಖಂ ಮನೊ ಬುದ್ಧಿರೇವಚ |
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ || (ಅ. 7 ಶ್ಲೋ. 4)
ಈ ಶ್ಲೋಕದ ತಾತ್ಪರ್ಯ ಹೀಗಿದೆ - ಭೂಮಿ (ಘನ ಪದಾರ್ಥ), ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವುಗಳು ಪ್ರಕೃತಿಯ ಎಂಟು ಪ್ರತ್ಯೇಕ ಅಭಿವ್ಯಕ್ತಿಗಳು.
ಈ ಎಂಟು ವಿಧವಾದ ಅಭಿವ್ಯಕ್ತಿಗಳಲ್ಲಿ ಮೊದಲ ಐದನ್ನು ನಾವು ಪಂಚಭೂತಗಳು ಎಂದು ಅರಿತಿದ್ದೇವೆ. ಮಾನವನಿಗೆ ಸಂಬಂಧಿಸಿದಂತೆ ನಮ್ಮ ಅನ್ನಮಯ ಕೋಶ (ನಮ್ಮ ಸ್ಥೂಲ ದೇಹ) ಹಾಗು ಪ್ರಾಣಮಯಕೋಶ (ಉಸಿರಾಟಕ್ಕೆ ಸಂಬಂಧಿಸಿದ್ದು) ಈ ಪಂಚಭೂತಗಳಿಂದ ಉಂಟಾದವು. ಹಾಗೆಯೇ ಮನಸ್ಸಿನಿಂದ ಮನೋಮಯಕೋಶ ಮತ್ತು ಬುದ್ಧಿಯಿಂದ ವಿಜ್ಞಾನಮಯ ಕೋಶ ಉಂಟಾಗಿದೆ. ಇಲ್ಲಿ ಅಹಂಕಾರ ಎಂಬ ಶಬ್ಧ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಅದಕ್ಕೆ ಕಾರಣ ನಾವು ‘ಅಹಂಕಾರ’ ಎನ್ನುವ ಪದವನ್ನು ಬಳಸುವ ರೀತಿ. ಸಾಮಾನ್ಯವಾಗಿ ಈ ಪದವನ್ನು ನಾವು ‘ಮದ’ ಅಥವಾ ಆಡು ಭಾಷೆಯಲ್ಲಿ ‘ಕೊಬ್ಬು’ ಎಂದು ಅರ್ಥ ಬರುವಂತೆ ಉಪಯೋಗಿಸುತ್ತೇವೆ. ಅಂತಹ ಪ್ರಯೋಗ ತಪ್ಪು. ‘ಅಹಂಕಾರ’ ಎಂಬ ಪದದ ಅರ್ಥ ‘ನಾನು’ ಎನ್ನುವ ಪ್ರಜ್ಞೆ ಮಾತ್ರ! ಜೀವಿಗಳಿಗೆ ಅಹಂಕಾರ ಇಲ್ಲದೆ ಹೋಗಿದ್ದರೆ ಇಲ್ಲಿ ನಾನು-ನೀನು-ಅವರು-ಇವರು-ಅದು-ಇದು ಎಂಬ ಬೇಧಭಾವದ ಪ್ರಜ್ಞೆಯೇ ಇರುತ್ತಿರಲಿಲ್ಲ. ‘ನಾನು’ ಎನ್ನುವುದು ಉಳಿದೆಲ್ಲಕ್ಕಿಂತ ಬೇರೆಯಾದದ್ದು, ನನಗೆ ಒಂದು ಪ್ರತ್ಯೇಕ ಅಸ್ಥಿತ್ವವಿದೆ ಎಂದು ಅರಿಯುವ ಪ್ರಜ್ಞೆಯೇ ಅಹಂಕಾರ. ಆಂಗ್ಲ ಭಾಷೆಯಲ್ಲಿ ಇದನ್ನು Identity ಎಂದು ಹೇಳಬಹುದು.
ಮುಂದಿನ ಶ್ಲೋಕ ಪ್ರಕೃತಿಯ ಪರಿಚವನ್ನು ವಿಸ್ತರಿಸುತ್ತದೆ:
ಅಪರೇಯ ಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ |
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ || (ಅ. 7 ಶ್ಲೋ. 5)
ಈ ಶ್ಲೋಕದ ತಾತ್ಪರ್ಯ ಹೀಗಿದೆ – ಮಹಬಾಹುವಾದ ಅರ್ಜುನನೇ, ಈ ಹಿಂದೆ ತಿಳಿಸಿದ ಕೆಳಮಟ್ಟದ (ಅಪರ) ಶಕ್ತಿಗಳಿಗಿಂತ ಉತ್ತಮ ಮಟ್ಟದ (ಪರ) ಶಕ್ತಿಯೊಂದು ಪ್ರಕೃತಿಯಲ್ಲಿದೆ. ಇದೇ ಪ್ರಾಣ ಎನ್ನುವ ಶಕ್ತಿ. ಈ ಶಕ್ತಿಯೇ ಜಗತ್ತಿಗೆ ಆಧಾರವಾಗಿದೆ.
ಈ ಪ್ರಾಣ ಎನ್ನುವ ಶಕ್ತಿ ಉತ್ತಮ ಮಟ್ಟದ್ದು. ಏಕೆಂದರೆ ಅದು ಇತರ ಕೆಳಮಟ್ಟದ ಶಕ್ತಿಗಳನ್ನು ಉಪಯೋಗಿಸುವ ಸಾಮರ್ಥ್ಯ ಪಡೆದಿದೆ. ಮತ್ತು ಈ ಶಕ್ತಿಯಿಂದಲೇ ನಮ್ಮ ಜಗತ್ತು ನಡೆಯುತ್ತಿದೆ. ಆದರೂ ಈ ಶಕ್ತಿ ಪರಮಾತ್ಮನನ್ನು ಮೀರಿದ್ದಲ್ಲ ಎಂದು ನಾವು ತಿಳಿಯಬೇಕು.
ಈ ಹಿಂದೆ ಡೌಟೇಶರವರು ಒಂದು ಪ್ರಶ್ನೆ ಕೇಳಿದ್ದರು - ‘ಎಲ್ಲ ಕಣಕಣಗಳಲ್ಲೂ ಪರಮಾತ್ಮನ ಅಂಶವಿದೆ ಎನ್ನುತ್ತಾರೆ ಹಾಗಾದರೆ ನಮ್ಮಲ್ಲಿ ಒಟ್ಟು ಎಷ್ಟು ಆತ್ಮಗಳಿವೆ’ ಎಂದು. ಅದಕ್ಕೆ ಸರಿಯಾದ ಉತ್ತರ ಈಗ ತೋಚುತ್ತಿದೆ – ಎಲ್ಲ ಕಣಕಣಗಳಲ್ಲಿಯೂ ಇರುವ ಪರಮಾತ್ಮನ ಅಂಶ ಪ್ರಕೃತಿ ಸ್ವರೂಪದಲ್ಲಿರುತ್ತದೆ. ಆದರೆ ಪರಮಾತ್ಮನ ಶುದ್ಧ ಅಂಶವಾದ ಆತ್ಮವು ಮಾತ್ರ ಒಂದೇ, ಅದು ಆನಂದಮಯ ಕೋಶದಲ್ಲಿ ಆಸೀನವಾಗಿರುತ್ತದೆ.
ಪ್ರಕೃತಿಯನ್ನು ಅರಿಯುವ ಪ್ರಯತ್ನ ಮುಂದುವರೆಯುವುದು…

Re: ಭಗವದ್ಗೀತೆ - ಭಾಗ 8
ಮೂರ್ತಿ ಸರ್ ನಿಮ್ಮ ಭಗವದ್ಗೀತಾ ಲೇಖನ ಮಾಲಿಕೆ ಬಹಳ ಚೆನ್ನಾಗಿವೆ.
ನನ್ನ ನಂಬಿಕೆಯ ಪ್ರಕಾರ ಭೂಮಿಯೇ ಮೇಲು ಮತ್ತು ಮೊದಲು. ಏಕೆಂದರೆ 'ಬಿಗ್ ಬ್ಯಾಂಗ್' ನ ನಂತರವೇ ಭೂಮಿ ಸೃಷ್ಠಿಯಾದದ್ದು ನಂತರವೇ ಒಂದೊಂದೇ ಜೀವಿಗಳು ಉಗಮವಾಗಿದ್ದು, ಆದ್ದರಿಂದ ಭೂಮಿಯೇ ಮೊದಲು ಬೀಜವಲ್ಲ. ಅಲ್ಲವೇ ಸರ್!
Re: ಭಗವದ್ಗೀತೆ - ಭಾಗ 8
ಪ್ರಿಯ ಉಮಾಶಂಕರ್,
ಬೀಜವಿಲ್ಲದಿದ್ದರೂ ಬೆಳೆಯಿಲ್ಲ, ಭೂಮಿಯಿಲ್ಲದಿದ್ದರೂ ಬೆಳೆಯಿಲ್ಲ. ಬೀಜ ಮತ್ತು ಭೂಮಿಯಲ್ಲಿ ಯಾವುದು ಮೇಲು?
Re: ಭಗವದ್ಗೀತೆ - ಭಾಗ 8
ಮೂರ್ತಿಯವರೆ ನನ್ನ ಈ ಪ್ರಶ್ನೆ ನಿಮಗೆ ಹಾಗು ಇತರರಿಗೆ ಬಾಲಿಶ ಎನ್ನಿಸಬಹುದು. ಆದರೂ ಕೇಳುತ್ತೇನೆ
ಪ್ರಕೃತಿ ಮತ್ತು ಪುರುಷ ಎರಡೂ ಆ ಭಗವಂತನೇ ಎಂಬುದರಲ್ಲಿ ೨ ಮಾತಿಲ್ಲ. ಆದರೆ ಅವೆರಡರಲ್ಲಿ ಪ್ರಕೃತಿಯೇ ಮೇಲೆಂದು ನನ್ನ ಭಾವನೆ ನೀವೇನೆನ್ನುತ್ತೀರಿ?
ನಿಮ್ಮ ಅನಿಸಿಕೆ ತಿಳಿಸಿ