ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಬರೆದವರು: ಕೆಎಲ್ಕೆ - ಕಳುಹಿಸಿದ ದಿನ 04 February 2010

ಮಗೇನೂ ಗೊತ್ತಿಲ್ಲ ಸ್ವಾಮಿ. ಅವರು ಕೊಟ್ಟದ್ದನ್ನು ಬಿತ್ತುತ್ತೇವೆ. ಬೀಜ ಕೊಡುವವರೂ ಅವರೇ, ಸಾಲ ಕೊಡುವವರೂ ಅವರೇ, ಸಬ್ಸಿಡಿ ಕೊಡುವವರೂ ಅವರೇ, ದುಡ್ಡು ಕೊಡುವವರೂ ಅವರೇ, ಕೊನೆಗೆ ಕೊಂಡುಕೊಳ್ಳುವವರೂ ಅವರೇ. ನಮ್ಮದೇನಿದೆ ಸ್ವಾಮಿ? 'ಬಡವಾ ನೀ ಮಡಗಿದ ಹಾಗಿರು' ಅಂತಾ ಹಿರಿಯರು ಹೇಳಿದ್ದು ಸುಳ್ಳಲ್ಲ. ಮೊನ್ನೆ ಬೆಂಗಳೂರಿಂದ ಬಂದ ನನ್ನ ಮಗ ಹೇಳುತ್ತಿದ್ದ " ಬಿತ್ತಿದ್ದೀರಿ ಅದಕ್ಕೆ ಅಳುತ್ತೀರಿ." 'ಬಿತ್ತೋದ್ ತಪ್ಪಾ?' ಅನ್ನೋ ಪ್ರಶ್ನೆಗೆ ಅವನಲ್ಲಿ ಉತ್ತರ ಇಲ್ಲ.


ದಿನಾ ಪೇಪರಿನಲ್ಲಿ ಬರುತ್ತಿದೆ, ಅದೇನೋ ಬಿಟಿ ಬದನೆಯಂತೆ- ಬುದ್ದಿವಂತರು ಸಾಹಿತಿಗಳು ವಿಚಾರವಂತರು ಬೇಡ ಬೇಡ ಅಂತಾರೆ; ವಿಜ್ಞಾನಿಗಳು, ಪರಿಶೋಧಕರು ಬೇಕು ಬೇಕು ಅಂತಾರೆ. ಬಿತ್ತುವವರನ್ನು ಕೇಳುವವರೇ ಇಲ್ಲ! ಕೇಳಿದರೂ ನಮಗೇನು ಗೊತ್ತು ಸ್ವಾಮಿ? ನಮಗೇನು ವಿದ್ಯೆ ಇದ್ಯಾ, ಬುಧ್ಧಿ ಇದ್ಯಾ?


"ಅದೇನೋ ಐಟಿ-ಬಿಟಿ  ಅಂದ್ಕೊಂಡು ಪಟ್ಟಣದಲ್ಲಿ ತುಂಬಾ ಹಣ ಮಾಡ್ತಾರಂತಲ್ಲ ಅದೇ ಬಿಟಿ ಬದನೆ ಕಾಯಿ ಬೀಜ ನಮಗೂ ಕೊಡ್ತಾರೆ, ಅದನ್ನ ಬಿತ್ತಿದರೆ ಕಾಸು ಬೆಳೆಯಬಹುದು" ಅಂತಾ ಮೊನ್ನೆ ಅದ್ಯಾವುದೋ ಕಾರ್ಯಕ್ರಮ ನೋಡಿ ಬಂದ ಪುಟ್ಟಣ್ಣ ಹೇಳ್ತಿದ್ದ. " ಕ್ರಿಮಿಗಳಿಗೆ ಹಾಕೋ ವಿಷಾನ ಬದನೆ ಒಳಗೆ ಹಾಕ್ತಾರಂತೆ, ಅದನ್ನ ತಿನ್ನೋರ ಗತಿ ಏನು; ಇವತ್ತಲ್ಲ ಇನ್ನು ಐವತ್ತು ವರ್ಷದ ಮೇಲೆ...ವಿಚಾರ ಮಾಡಿ" ಅಂತಾ ಅಂಗಡಿ ಅನಂತ ಹೇಳ್ತಿದ್ದ. ಅವನನ್ನು ಊರ ಜನ ಪುಸ್ತಕದ ಬದನೆ ಕಾಯಿ ಅಂತಾರೆ. ಅದೇನೋ ರೈತಚಳುವಳಿ-ಪ್ರತಿಭಟನೆ ಮಾಡ್ತೀನಿ ಅಂತಾ ಹೋಗಿ ಬೆಂಗಳೂರಿನಲ್ಲಿ ಪೋಲೀಸರಿಂದ ಒದೆ ತಿಂದು ಓಡಿ ಬಂದು ನಮ್ಮ ಹಳ್ಳೀಲಿ ಗೂಡಂಗಡಿ ಹಾಕಿ ಕುಂತೋನು ಅವನು.


ಈ ಬೀಜ ಬಿತ್ತಿದ ಭೂಮಿಲಿ, ಬೇರೆ ಬೀಜ ಬಿತ್ತೋಕೆ ಆಗೊಲ್ವಂತೆ....ಬೀಜ ನಾವು ಸಂಗ್ರಹ ಮಾಡೋ ಹಾಗಿಲ್ವಂತೆ.. ಅವರ ಹತ್ರಾನೆ ತಗೋ ಬೇಕಂತೆ. ಅದೇನೋ ಅವರ ಹತ್ರ ಪೇಟೆಂಟ್ ಅಂತಾ ಇದ್ಯಂತೆ. ನಾವು ಬೆಳೆಯೋ ಬೆಳೆಯ ಬೀಜ ಕೂಡ ನಾವು ಸಂಗ್ರಹಿಸೋ ಹಾಗಿಲ್ಲ! ಇದು ಎಲ್ಲಿಯ ನ್ಯಾಯ ಸ್ವಾಮಿ??? ನಾವೇನು ಬ್ರಿಟೀಷ್ ಸಾಮ್ರಾಜ್ಯದಲ್ಲಿ ಇದೇವಾ? ಸರಕಾರ ನಮ್ಮದೇ ಅಲ್ವಾ? ನಾವು ವೋಟು ಹಾಕಿದ್ದು ಇವರಿಗೇ ಅಲ್ವಾ?


"ಸರ್ಕಾರ ನಮಗೇ ಮೋಸ ಮಾಡುತ್ತಾ.....ತಾಯಿಯ ಮೊಲೆ ಹಾಲು ವಿಷ ಆಗೋಕೆ ಸಾಧ್ಯಾನ?" ಅಂತಾ ಮೊನ್ನೆ ಕೇಳಿದ್ದಕ್ಕೆ ಮಗ- " ರೈತರು ಮುಗ್ಧರು ಅಂತಾ ಇದಕ್ಕೆ ಹೇಳೋದು" ಅಂತಾ ನಗ್ತಿದ್ದ!  ಮತ್ತೆ, ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.  ಪಾಪ..ಉತ್ತರ ಅವನಿಗೂ ಗೊತ್ತಿರಲಿಕ್ಕಿಲ್ಲ; ಎಷ್ಟೆಂದರೂ ರೈತನ ಮಗ ಅಲ್ವಾ?  


ಪೇಟೆಯಲ್ಲಿ ತುಂಬಾ ಜನ ಮಾತಾಡ್ಕೋತಾರಂತೆ - ರೈತನ ಈ ಪರಿಸ್ಥಿತಿಗೆ ಅವನೇ ಕಾರಣ, ಅಕ್ಷರ ಕಲಿಯೋಲ್ಲ, ವ್ಯವಸಾಯದಲ್ಲಿ ಹೊಸ ಪ್ರಯೋಗ ಮಾಡೋಲ್ಲ, ಸಾರಾಯಿ ಬಿಡೋಲ್ಲ, ಸಾಲ ತೀರಿಸದೆ ಇರೋದೇ ಅವನಿಗೆ ಚಟವಾಗಿಬಿಟ್ಟಿದೆ. ಸರಕಾರ ಎಷ್ಟು ಸಬ್ಸಿಡಿ ಕೊಡುತ್ತೆ, ಟ್ಯಾಕ್ಸ್ ಅನ್ನೋದೇ ಇಲ್ಲ; ಇದರೆಲ್ಲರ ಪ್ರಯೋಜನ ತೆಗೆದುಕೊಂಡರೆ ಹೇಗೆ ಮಾಡಬಹುದು....ಅಮೇರಿಕಾದ ರೈತನನ್ನು ನೋಡಿ ಕಲಿಬಾರ್ದಾ???


ಇರಬಹುದು ಸ್ವಾಮೀ. ನಾವಿರೋದೆ ಹೀಗೆ, ನಾವು ಬಾಳೋದೆ ಹೀಗೆ. ನಮ್ಮ ಊರಲ್ಲಿ ಶಾಲೆ ಇದೆ ಆದರೆ ಮೇಷ್ಟ್ರಿಲ್ಲ. ಟ್ಯಾಕ್ಟರ್ ಇದೆ ಆದ್ರೆ ರಸ್ತೆ ಇಲ್ಲ. ಸರಕಾರ ಕರಂಟ್ ಕಡಿಮೆ ಬೆಲೆಗೆ ಕೊಡುತ್ತೆ ಆದರೆ ಕರಂಟ್ ಇಲ್ಲ. ಸಾಲ ಕೊಡುತ್ತೆ ಆದರೆ ನೀರು ಕೊಡಲ್ಲ. ಸರಾಯಿ ನಿಷೇಧ ಮಾಡ್ತಾರೆ ಆದ್ರೆ ಕಳ್ಳ ಬಟ್ಟಿಯನ್ನಲ್ಲ . ಸರಾಯಿ ಹಾಕಿ ಬೆಳೆ ತೆಗೆಯಬಹುದಾ? ಹೋಗ್ಲಿ ಬಿಡಿ;  ಅದೇನೋ ಅಮೇರಿಕಾ ಅಂದ್ರಲ್ಲ, ಅದೆಲ್ಲಿದೆ ? ನನಗೆ ಪಕ್ಕದ ತರೀಕೆರೆ ಮಾತ್ರ ಗೊತ್ತು. ಅಮೇರಿಕಾ ಅಂದ್ರೆ ಬೆಂಗಳೂರಿಗಿಂತಾ ದೊಡ್ಡದಾ? ಅದಕ್ಕೆ ಇರಬೇಕು ನನ್ ಮಗ ಯಾವಾಗಲೂ  'ಅಮೇರಿಕೆಗೆ ಹೋಗ್ಬೇಕು' ಅಂತಾ ಇರ್ತಾನೆ. 


ಏನೋ ಸ್ವಾಮಿ. ಪೇಟೆಯವರು ತಿಳಿದೋರು, ದುಡ್ಡು ಇರೋರು, ಸರಕಾರ ಇರೋದೂ ಪಟ್ಟಣದಲ್ಲೇ. ಅವರು ಯಾವುದು ಬಿತ್ತು ಅಂತಾರೊ ಅದನ್ನೇ ಬಿತ್ತಿದರಾಯ್ತು. ಬೀಜ, ಗೊಬ್ಬರ, ಕ್ರಿಮಿನಾಶಕ, ಕರಂಟು, ಸಾಲ, ಸರಾಯಿ ಎಲ್ಲ ಕೊಡುವವರೂ ಅವರೇ. ದೆವರು ಅವರನ್ನು ಚೆನ್ನಾಗಿ ಇಡಲಿ. ( ಅನ್ಯಾಯ ಮಾಡ್ತಾ ಇರೋದು ದೇವರು ಮಾತ್ರ; ಕೊಡಬೇಕಾಗಿರೋದು ಒಂದನ್ನೇ- ಮಳೆ; ಅದನ್ನೇ ಕೊಡೋಲ್ಲ ಅಂದ್ರೆ!) 


 

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.3 (4 ಓಟುಗಳು)
ರವಿವರ್ಮ್'s picture
ಮಂಗಳ, 09/02/2010 - 08:45 ರಂದು ರವಿವರ್ಮ್ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಏನ್ ಬಡ್ಕಂಡ್ರೆ ಏನ್ ಬಂತು ಕೆ ಎಲ್ಕೆ ಅವರೆ ಈ ಕೆಟ್ಟ ರಾಜಕಾರಣಿಗಳು ತಮಗೆ ಬೇಕಾದ್ದನ್ನೇ ಮಾಡ್ತಾರೆ avarige janara ಮನಸ್ಸು ಅರ್ಥ ಆಗೊಲ್ಲ

ಕೆಎಲ್ಕೆ 's picture
ಬುಧ, 10/02/2010 - 10:22 ರಂದು ಕೆಎಲ್ಕೆ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಧನ್ಯವಾದಗಳು ರವಿವರ್ಮ. ಸದ್ಯಕ್ಕೆ ಕೇಂದ್ರಸರಕಾರ ಬಿಟಿ ಬದನೆಗೆ ಅನುಮತಿ ಕೊಡೊಲ್ಲ ಅಂತಾ ಹೇಳಿಕೆ ಕೊಟ್ಟಿದೆ. ಬೀಸುವ ದೊಣ್ಣೆ ತಪ್ಪಿದೆ, ಆದರೆ ಆಯುಷ್ಯ ಎಷ್ಟು ಎಂಬುದು ತಿಳಿದಿಲ್ಲ!

ಕೆಎಲ್ಕೆ 's picture
ಸೋಮ, 08/02/2010 - 14:15 ರಂದು ಕೆಎಲ್ಕೆ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಪ್ರಿಯ ಉಮಾಶಂಕರ್ ಹಾಗೂ idiot(???), ಪೂರಕ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

idiot's picture
ಶನಿ, 06/02/2010 - 00:18 ರಂದು idiot (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಬಿ. ಟಿ. ಬದನೆಯನ್ನು ಭಾರತಕ್ಕೆ ತಂದು ನಮ್ಮ ದೇಶವನ್ನು ಕೊಲ್ಳೆ ಹೊಡೆಯಲು ಯತ್ನಿಸುತ್ತಿರುವ MNC ಕಂಪನಿಗಳ ಎಂಜಲು ಕಾಸಿಗೆ ಬಲಿ ಬಿದ್ದು ದೇಶವನ್ನೇ ಮಾರಲು ಹೊರಟ 'ನಮ್ಮ' ರಾಜಕಾರಣಿಗಳ ಹಾಗೂ ಕೆಲವು (ಅ)ವಿಜ್ನಾನಿಗಳನ್ನು ಕೇಳುವವರೇ ಇಲ್ಲವೇ ?. ಇದು ಮುಂದುವರಿದರೆ ಕೊನೆಗೊಂದು ದಿನ ಅನ್ನಕ್ಕಾಗಿ MNC ಕಂಪನಿ (ಅಂದರೆ ಅಮೆರಿಕ ದೇಶ) ಗಳನ್ನು ಭಿಕ್ಷೆ ಬೇಡುವ ಪರಿಸ್ಥಿಗೆ ನಮ್ಮ ದೇಶ ಮುಟ್ಟುವುದು ಖಂಡಿತ.

vinay_2010's picture
ಶುಕ್ರ, 05/02/2010 - 17:59 ರಂದು vinay_2010 (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಇತ್ತೀಚಿನ ದಿನಗಳಲ್ಲಿ ಅಭಿವ್ರಧ್ಧಿಗೆ ಕಲ್ಲು ಹಾಕುವವರ ಸಂಖ್ಯೆ ಜಾಸ್ತಿ ಆಗಿದೆ. ದೇವೇಗೌಡರನ್ನೇ ನೋಡಿ. ಅವರಿಗೆ ರಸ್ತೆ ಮಾಡುವುದು ಬೇಡ. ಇನ್ನೊಬ್ಬರಿಗೆ ಬಳ್ಳಾರಿಯಲ್ಲಿ ಏರ್ ಪೋರ್ಟ್ ಬೇಡ. ನಿಮ್ಮದೂ ಅದೇ ರಾಗ. ಸ್ವಾಮಿ ಎದ್ದೇಳಿ..ಎಷ್ಟು ದಿನ ಜಟಕಾ ಗಾಡಿಯಲ್ಲೇ ಪ್ರಯಾಣ ಮಾಡುತ್ತಿರಿ? ಈಗೆಲ್ಲ ರಾಕೆಟ್ ಬಂದಿದೆ.  ಹೊಸ ಆವಿಷ್ಕಾರಗಳಿಂದ ಕೃಷಿ ರಂಗದಲ್ಲಿ ನಾವು ಕ್ರಾಂತಿ ಮಾಡಬೇಕು. ಆಗಲೇ ಭಾರತ ಮುಂದು ಬರಲು ಸಾಧ್ಯ. ಬ್ರಷ್ಟ ರಾಜಕಾರಣಿಗಳಿಗೆ, ಸರಕಾರಕ್ಕೆ ಬುಧ್ಧಿ ಕಲಿಸಲು ಸಾಧ್ಯ.

ಕೆಎಲ್ಕೆ 's picture
ಸೋಮ, 08/02/2010 - 14:12 ರಂದು ಕೆಎಲ್ಕೆ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ವಿನಯ್, ಕ್ರಾಂತಿ ಮಾಡಬೇಕೆಂಬವರು, ತಮ್ಮ ಕ್ರಾಂತಿಕಾರಿ ಪ್ರಯೋಗಗಳನ್ನು ಇಲಿಯಮೇಲೊ, ಜಿರಲೆಗಳಮೇಲೋ ಮಾಡಿಕೊಳ್ಲಿ. ಬಡ ರೈತನನ್ನೇಕೆ ಪ್ರಯೋಗಪಶು ಮಾಡುವದು? ಎಂಭತ್ತು ದೇಶಗಳು, ಭಾರತದ ೧೧ ರಾಜ್ಯಗಳು ನಿಷೇಧಿಸಿರುವ ಈ ಬಿಟಿ ಬದನೆ ನಮ್ಮ ನೆಲದಲ್ಲೇ ಕ್ರಾಂತಿ ತೋರಬೇಕೆ??

ವಿನಯ್_ಜಿ's picture
ಶುಕ್ರ, 05/02/2010 - 18:28 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಯಾರದೋ ID ಹಾಕಿ ಬರೆಯುವ ಮೊದಲು ನಿಮ್ಮ ಹೆಸರು ಹಾಕಿ ಬರೆಯಬಹುದಿತ್ತಲ್ಲಾ ಅನಾಮಿಕ ಮಹಶಯರೇ(vinay_2010)...?


-- ವಿನಯ್


 


 


 


 


 


 

ಉಮಾಶಂಕರ ಬಿ.ಎಸ್'s picture
ಶುಕ್ರ, 05/02/2010 - 17:56 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಕೆ ಎಲ್ಕೆ ರವರೆ ನಿಮ್ಮ ಲೇಖನದಲ್ಲಿ ಪ್ರಸ್ತುತ ಮುಗ್ದ ರೈತನ ಮನದ ಬವಣೆಗಳನ್ನು ಚೆನ್ನಾಗಿ ಬಿಂಬಿಸಿದ್ದೀರಿ. ರಾಜಕೀಯದ ಬೇಳೆಯ ಮಧ್ಯೆ ತಿನ್ನುವ ಬೆಳೆಗೆ ಕಲ್ಲು ಹಾಕುವವರಿಗೆ ಓಟು ಹಾಕಿದ/ ಹಾಕುವ ನಾವೇ ಧನ್ಯರು.

ವಿ.ಎಂ.ಶ್ರೀನಿವಾಸ's picture
ಶುಕ್ರ, 05/02/2010 - 14:53 ರಂದು ವಿ.ಎಂ.ಶ್ರೀನಿವಾಸ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಧನ್ಯವಾದಗಳು ಬಿಟಿಬದನೆಯ ಪರವಾಗಿಲ್ಲದೇ ಇರುವುದಕ್ಕೆ.

ವಿ.ಎಂ.ಶ್ರೀನಿವಾಸ's picture
ಶುಕ್ರ, 05/02/2010 - 10:17 ರಂದು ವಿ.ಎಂ.ಶ್ರೀನಿವಾಸ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ನಿರೂಪಣೆ ಮತ್ತು ಮಾಹಿತಿ ದೃಷ್ಟಿಯಿಂದ ಒಂದೊಳ್ಳೆ ಲೇಖನ. ಆದರೆ ನೀವು ಇದರ ಪರ ಅಥವಾ ವಿರೋಧ ಅನ್ನೋದು ಸ್ವಷ್ಟವಾಗಿಲ್ಲ. 7ನೇ ಪ್ಯಾರದಲ್ಲಿ ಹೇಳಿರುವ " ಸ್ಕೂಲ್ ಇದೆ ಮೇಷ್ಟ್ರಿಲ್ಲ..................... ಎಂಬಿತ್ಯಾದಿ ಮಾತುಗಳು ಮನಮಿಡಿಯುತ್ತವೆ.

ಕೆಎಲ್ಕೆ 's picture
ಶುಕ್ರ, 05/02/2010 - 11:48 ರಂದು ಕೆಎಲ್ಕೆ ಅವರು ಹೇಳುತ್ತಾರೆ
Re: ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

ಪ್ರಿಯ ಶ್ರೀನಿವಾಸ್,

ಈ 'ಬೇಕು-ಬೇಡ' ಗಳ ದ್ವಂದ್ವದಲ್ಲಿ ರೈತನ ಪಾಡು ಹಾಗೂ ತುಮುಲವನ್ನು ತೋರಿಸುವದು ಲೇಖನದ ಉದ್ದೇಶವಾಗಿತ್ತು. 

ಬಿಟಿ ಬದನೆಯ ವಿಷಯಕ್ಕೆ ಬಂದರೆ ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯೇ ಇಲ್ಲ. ಹಿಂದೆ ಕ್ರಿಮಿನಾಶಕಗಳನ್ನೂ ನಮ್ಮ ವಿಜ್ಞಾನಿಗಳು ಬಲವಾಗಿ ಪ್ರತಿಪಾದಿಸಿ ರೈತರ ಮೇಲೆ ಹೇರಿದ್ದರು. ಅವುಗಳ 'ಮನುಜನಾಶಕ'  ಗುಣಗಳನ್ನು ನಾವು ಇವತ್ತು ಅರಿಯುತ್ತಿದ್ದೇವೆ; ಅನುಭವಿಸುತ್ತಿದ್ದೇವೆ. ಈ ಹಿಂದೆ ಬಂದ ಬಿಟಿ ಹತ್ತಿಯ ಲಾಭ-ನಷ್ಟಗಳ ಕಥೆ ನಮಗೆ ಗೊತ್ತಿದ್ದುದೇ. NSL ಎಂಬ ಆಂಧ್ರದ ಕಂಪನಿ ಬಿಟಿ ಹತ್ತಿಯಿಂದ ಮಾಡಿಕೊಂಡ( ಮಾಡಿಕೊಳ್ಳುತ್ತಿರುವ) ಕೋಟ್ಯಾಂತರ ಲಾಭ, ಅದರ ಹಿಂದಿರುವ ದೇಶೀ,ವಿದೇಶೀ ಕೈಗಳು....ಇವೆಲ್ಲಾ ಅನೇಕರಿಗೆ ತಿಳಿಯದ ವಿಷಯವೇನಲ್ಲ. ಅರ್ಥವಾಗದ್ದೆಂದರೆ: ಇಂಥಾ ದುರಾಸೆಗೆ ಬೆನ್ನು  ಬಿದ್ದು, ದೂರದೃಷ್ಟಿ ಕಳೆದುಕೊಂಡು ನಮ್ಮದೇ ಸರಕಾರ( ಕೇಂದ್ರ) ನಮಗೇ ಮೋಸ ಮಾಡುತ್ತಾ?

ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 5 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಕೆ ಎಲ್ ಕೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಇದು ಇಲ್ಲಿ ಅಪ್ರಸ್ತುತ ಹಾಗು ಅನಗತ್ಯ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content