(1994 ಜನವರಿಯಲ್ಲಿ ರಚಿಸಿದ ಕವನ)
ಪುರುಷ-ಪ್ರಕೃತಿ
ಚಿರ ನೂತನಳೇ; ಚಿರ ಚೇತನಳೇ;
ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!
ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರು
ತರ್ಕಕೆ ನಿಲುಕದೆ ನಿಟ್ಟುಸಿರು..!?
ನಾ ಮರವಂತೆ; ನೀ ಲತೆಯಂತೆ...!
ಈ ಜಗದೊಳು ನಮ್ಮಯ ಸಮರುಂಟೆ!?
ಬಾ ಏರುತ ಬೆಳೆಯುವ ಬಾನಲ್ಲಿ;
ಬೇರಿಳಿಸುವ ಭೂಮಿಯ ಒಡಲಲ್ಲಿ
ಜೀವಕೆ ರಾಗವು ನೀನಾಗುವೆ;
ಎಂದೆಂದಿಗು ತಾಳವೆ ನಾನಾಗುವೆ;
ಹೃದಯದ ವೀಣೆಯ ಸುಸ್ವರ ಮೀಟಿ;
ಹಾಡುವ ಒಟ್ಟಿಗೆ ಹೊಸ ಧಾಟಿ!
ನೀ ಕಡಲಾಗಿ; ನಾ ಅಲೆಯಾಗಿ
ಎಂದಿಗು ಬಾಳುವ ಜೊತೆಯಾಗಿ
ಜೀವ ಜಾಲಕೆ ಮೂಲವೆ ಆಗಿ;
`ಸಂಧ್ಯಾ' ಸಮಯದಿ ನಿಗೂಢವಾಗಿ...!?

ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿಯವರೆ. ನೀವು ಹೇಳಿದ್ದು ನಿಜ. ಮೇಲ್ನೋಟಕ್ಕೆ ಈಗ `ಏಳಿಗೆ'ಯಾದಂತೆ ಕಂಡರೂ ವಾಸ್ತವವಾಗಿ ಸರ್ವನಾಶದತ್ತಲೇ ಹೋಗುತ್ತಿದ್ದಾನೆ. ಮುಖ್ಯವಾಗಿ `ಭೋಗ' ಹಾಗೂ `ಸುಖ'ಗಳ ಪರಿಕಲ್ಪನೆಯೇ ಬದಲಾಗಬೇಕಾಗಿದೆ. ಆಗ ಮಾತ್ರ `ಚೈತನ್ಯ ದೇವತೆ' ಹಾಗೂ `ಜಡ ದೇವತೆ'ಗಳ ನಡುವಿನ ಭೇದ ತೊಲಗಿಸಬಹುದು! ಏನಂತೀರಿ?
ಪ್ರಭಾಕರ್ ಅವರೆ, ಪ್ರಕೃತಿಯೊಡನೆ
ಪ್ರಭಾಕರ್ ಅವರೆ,
ಪ್ರಕೃತಿಯೊಡನೆ ಮನುಜನಿಗಿರುವ ಅವಿನಾಭಾವ ಸಂಬಂಧವನ್ನು ನವಿರಾಗಿ ಕವನದಲ್ಲಿ ಕಾಣಿಸಿದ್ದೀರಿ. ಆದರೆ ಈಗ ಮನುಷ್ಯ ಪ್ರಕೃತಿಯನ್ನು ಕೇವಲ ಭೋಗವಸ್ತುವಂತೇ ಕಾಣುತ್ತಾ ತನ್ನ ಏಳಿಗೆಯನ್ನು ಮಾತ್ರ ನೋಡುತ್ತಿದ್ದಾನೆ. ಹಾಗಾಗಿಯೇ ಪ್ರಕೃತಿ ಮುನಿಯುತ್ತಿದೆ!
ಸುಂದರ ಕವನ.
ಹೌದು ವಿಯನ್ ಅವರೇ ನೀವು ಹೇಳಿದ್ದು
ಹೌದು ವಿಯನ್ ಅವರೇ ನೀವು ಹೇಳಿದ್ದು ಅಕ್ಷರಶಃ ನಿಜ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಭಾಕರ ಸರ್, ನಿಮ್ಮ ಕವನ ಆ ದೇವನ
ಪ್ರಭಾಕರ ಸರ್,
ನಿಮ್ಮ ಕವನ ಆ ದೇವನ ಕೊಡುಗೆಯಾದ ಮಾನವ ಮತ್ತು ಪ್ರಕೃತಿಯಲ್ಲಿ ಇರುವ ಆ "ಮಧುರ ಸೌಮ್ಯತೆ" ಯನ್ನು ಸುಂದರವಾಗಿ ನಮಗೆ ಪರಿಚಯಿಸುತ್ತಿದೆ.
ಮನುಜ ಪ್ರಕೃತಿ ಬಾಳ್ವೆಯ ಹಾದಿಯನ್ನು ನೋಡಿ ನೆಡೆದರೆ ಇಂದು ಸಮಾಜದಲ್ಲಿ ಇರುವ ಎಷ್ಟೋ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುವುದಲ್ಲವೇ..?
ಪ್ರತಿಕ್ರಿಯೆಗೆ ಧನ್ಯವಾದ
ಪ್ರತಿಕ್ರಿಯೆಗೆ ಧನ್ಯವಾದ ಉಮಾಶಂಕರ್. ಆದರೆ ನಿಮ್ಮ ಅಭಿಪ್ರಾಯ ಸ್ಪಷ್ಟವಾಗಿ ಅರ್ಥವಾಗಲಿಲ್ಲ; ಸ್ಪಲ್ಪ ಬಿಡಿಸಿ ಹೇಳ್ತೀರ?
ಪ್ರಶ್ನಾರ್ಥಕ ಚಿನ್ಹೆ
ಪ್ರಶ್ನಾರ್ಥಕ ಚಿನ್ಹೆ ಹಾಕಿದ್ದೀರಲ್ಲ ಅದಕ್ಕೆ ಕೇಳಿದೆ......
ಕ್ಷಮಿಸಿ ಉಮಾಶಂಕರ್! ನನ್ನ
ಕ್ಷಮಿಸಿ ಉಮಾಶಂಕರ್! ನನ್ನ ಕನವದಲ್ಲಿ ಮೊದಲು ಇದ್ದ ಬೇರೆ ಪದಗಳನ್ನು ತೆಗೆದು, ಈ `ಸಂಧ್ಯಾ ಸಮಯದಿ ನಿಗೂಢವಾಗಿ' ಸೇರಿಸಿ upload ಮಾಡಿದ್ದೆ. ಆದರೆ ಅವಸರದಲ್ಲಿ ಪಕ್ಕದಲ್ಲಿದ್ದ ಈ ಚಿನ್ಹೆಗಳನ್ನು ತೆಗೆಯದೇ ಇದ್ದುದು ಈ ಗೊಂದಲಕ್ಕೆ ಕಾರಣವಾಗಿದೆ.
`ಸಂಧ್ಯಾ' ಸಮಯದಿ
`ಸಂಧ್ಯಾ' ಸಮಯದಿ ನಿಗೂಢವಾಗಿ...!?
ಮುಂದೆ ಇರ್ಬೇಕು ಅನ್ನಿಸುತ್ತೇ........ ಹೌದಾ ಸರ್
ನಿಮ್ಮ ಅನಿಸಿಕೆ ತಿಳಿಸಿ