ಸಾವು

ಬರೆದವರು: ಎಚ್.ಎಸ್. ಪ್ರಭಾಕರ - ಕಳುಹಿಸಿದ ದಿನ 22 November 2009

ಸಾವು

(ಇದು ನಾನು 1997 ಮಾರ್ಚ್ ನಲ್ಲಿ ಬರೆದ ಅಪ್ರಕಟಿತ ಕವನ)

ಹುಟ್ಟೆಂಬ ಗೆಳೆಯನಾ ಮುಂದೆ ಓಡಲು ಬಿಟ್ಟು
ಹಿಂದೆಯೇ ನೆರಳಾಗಿ ಬೀಸು ಹೆಜ್ಜೆಯನಿಟ್ಟು
ನಿಲ್ಲದೇ ಸಾಗುತಿಹ ನಿಃಶಬ್ದ ಸಾವೇ
ಎಲ್ಲಯ್ಯ ನಿನ್ನ ನಿಲ್ದಾಣ!?

ಗರ್ಭ ಗುಡಿಯಲಿ ಜ್ಯೋತಿ ಅವ್ಯಕ್ತ ಬೆಳಗಿ
ತಾಮಸದಿ ಗೆಳೆಯನಾ ಹಿಂದೆಯೇ ಅಡಗಿ
`ರಕ್ತ ಸಂಬಂಧಿ'ಯ ಬೆನ್ನ ಹಿಂದೆಯೇ ಹೊರ ಬಂದು
ಎಲ್ಲಯ್ಯ ಕಾಯುತಿರುವೆ.....!?

ಯಾವ ಸೀಮೆಯೋ ನಿಂದು; ಎಲ್ಲಿ ಹೊಂಚುವೆ ಕುಂತು?
ಎನಿತು ಬೀಸುವೆ ನೀನು ನಿನ್ನ ಬಲೆಯಾ
ಜಗವ ಸುತ್ತುವ ನಿನಗೆ ಬಿಡುವೆ ಇಲ್ಲವೇ ಕಡೆಗೆ
ಎಲ್ಲಯ್ಯ ನಿನ್ನ ವಾಸ!?

ಜೀವಿಗಳ ನೆರಳಾಗಿ ಮುಂಜಾನೆ ಮೈಚಾಚಿ;
ನಡು ನೆತ್ತಿ ಮಧ್ಯಾಹ್ನ ಕಾಲ ಬುಡಕೇ ಬಂದು
ಮುಸ್ಸಂಜೆ ಬೆಳಕಿಗೆ ದಿಕ್ಕು ಬದಲಿಸಿ ತಿರುಗಿ
ಎಲ್ಲಯ್ಯ ಲೀನವಾದೆ....!?

ಹಸಿದಾಗ ಮಾತ್ರವೇ ಎಲ್ಲಿಯೋ ಬಂದೆರಗಿ
ಸಿದ್ಧ `ಮಿಕ'ವನ್ನಷ್ಟೆ ಬೇಟೆಯಾಡುತಲಿದ್ದೆ
ಈಗೀಗ ಹೊಂಚುತಿಹೆ ಮನೆ ಹಿತ್ತಲಲ್ಲೇ
ಏನಯ್ಯ ನಿನ್ನ ಲೀಲೆ...!

ನಿನ್ನ ಸೆಳೆಯಲು ಇಲ್ಲಿ ಹಲವಾರು ವಾಸನೆ
ಪಂಚ ಭೂತಗಳಲ್ಲಿ ದೇಹದಣುವಣುವಲ್ಲಿ
ತುಂಬಿ ತುಳುಕಾಡುತಿದೆ ಕೊಡ ಚೆಲ್ಲುವಷ್ಟು
ಇಲ್ಲಯ್ಯ ನಿನ್ನ ತಪ್ಪು

ತಳಿರು ತೋರಣಗಳಿಲ್ಲ; ಸ್ವಾಗತಿಸುವವರಾರಿಲ್ಲ
ಅನಿವಾರ್ಯದಾ `ಅತಿಥಿ'; ಮಾಡುವೆ ನಮ್ಮ `ತಿಥಿ'
`ಗೆಳೆಯ'ನಾ ತಿಂದುಂಡು `ಬಾಳ' ಎಲೆ ಎಸೆಯಲು
ಎಲ್ಲಿದೆಯೋ ನಿನ್ನ ತಿಪ್ಪೆ.....!?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಎಚ್.ಎಸ್. ಪ್ರಭಾಕರ's picture
ಗುರು, 03/12/2009 - 01:39 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
//ಈ ಮನುಷ್ಯ ಜನ್ಮ// ಎಂದರೆ

//ಈ ಮನುಷ್ಯ ಜನ್ಮ// ಎಂದರೆ ನಮ್ಮದೇ ಕಣ್ಣು, ಕವಿ, ಮೂಗು, ನಾಲಿಗೆ ಹಾಗೂ ಚರ್ಮಗಳಿಂದ (ಪಂಚೇದ್ರಿಯಗಳಿಂದ) ನಾವೇ ಸುತ್ತಿಕೊಂಡ ಮೋಹದ ಸ್ವಯಂಕೃತ ಅಪರಾಧ ಅಲ್ಲವೆ ಇದು? ಅಂದರೆ ನಾವೇ ಇದರಿಂದ ಬಿಡುಗಡೆಯಾಗಬೇಕು. ನೀವು ಹೇಳಿದಂತೆ ಇದೇನೋ ಕಡ್ಲೆ ಪುರಿ ತಿಂದಷ್ಟು ಸುಲಭವಂತೂ ಅಲ್ಲ ಬಿಡಿ!

ವಿನಯ್_ಜಿ's picture
ಬುಧ, 02/12/2009 - 11:22 ರಂದು ವಿನಯ್_ಜಿ ಅವರು ಹೇಳುತ್ತಾರೆ
ಹೌದು ಪ್ರಭಾಕರ್ ರವರೆ, ನೀವು

ಹೌದು ಪ್ರಭಾಕರ್ ರವರೆ, ನೀವು ಹೇಳಿದ್ದು ನಿಜ.

"ಅದು (ಪುನಃ ಜನ್ಮ) ಪುನರಾವರ್ತನೆಯಾಗದಂತೆ ಮಾಡಿಕೊಳ್ಳುವುದೇ ನಿಜವಾದ `ಸಾವು' (ಮೋಕ್ಷ) ಎಂಬ ಮಾತೂ ಇದೆ." ಪ್ರಕಾರ ಹೇಳುವುದಾದರೆ Mostly ಈ ಮನುಷ್ಯ ಜನ್ಮವೇ ಮೋಹದ ಸುರಳಿಯಿಂದ ತುಂಬಿ ಹೋಗಿದೆ... ಅದಕ್ಕೆ ಜೀವಾತ್ಮವು ಅಷ್ಟು ಸುಲಭವಾಗಿ "ಮೋಕ್ಷ" ದೊರಕಿಸಿಕೊಳ್ಳಲಾಗದು. ಸಿಕ್ಕರೆ ಆ ಜೀವಾತ್ಮಕ್ಕೆ ಇದಕ್ಕಿಂತ ದೊಡ್ಡದು ಯಾವುದು ಇಲ್ಲ..Smile

ವಿನಯ್_ಜಿ's picture
ಮಂಗಳ, 01/12/2009 - 19:05 ರಂದು ವಿನಯ್_ಜಿ ಅವರು ಹೇಳುತ್ತಾರೆ
ಹೌದು ಪ್ರಭಾಕರ್ ರವರೆ, ಸಾವು

ಹೌದು ಪ್ರಭಾಕರ್ ರವರೆ, ಸಾವು ಎನ್ನೋದನ್ನ ಮಾನವ ಗೆದ್ದುಬಿಟ್ಟಿದ್ದರೆ ಅವನು ಎಲ್ಲಿ ಎಲ್ಲಾ ಮರೆತುಬಿಡುತ್ತಾನೋ/ಅಹ0ನಿಂದ ಮೆರೆದುಬಿಟ್ಟಾನೋ ಎಂದು ತಿಳಿದೇ ದೇವರು ಹುಟ್ಟಿನ ಹಿಂದೆ ಸಾವು ಇಟ್ಟಿದ್ದು! ಅನಂದ್ ಚಿತ್ರದ ಗೀತೆಯಂತೆ " ಕಭಿ ದೆಖೊ ಮನ್ ನಹಿ ಜಾಗೇ, ಪೀಚೆ ಪೀಚೆ ಸಪನೋ ಕೆ ಭಾಗೆ... ಎಕ್ ದಿನ್ ಸಪನೊಕೆ ರಾಹಿ, ಚಲಾ ಜಾಯೆ ಸಪ್ನೋ ಸೇ ಆಗೆ ಕಹ..." ಬರೀ ಅಸೆಗಳ ಮೂಟೆ ಹೊತ್ತೇ ಕೊನೆಗೆ ಎಲ್ಲಾ ಬಿಟ್ಟು ಹೋಗಬೇಕು ಅಷ್ಟೇ!

ಎಚ್.ಎಸ್. ಪ್ರಭಾಕರ's picture
ಮಂಗಳ, 01/12/2009 - 23:06 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಭಾವನಾತ್ಮಕವಾಗಿ ನಿಮ್ಮ ಮಾತು ಸರಿ

ಭಾವನಾತ್ಮಕವಾಗಿ ನಿಮ್ಮ ಮಾತು ಸರಿ ವಿನಯ್ ಅವರೇ. ಆದರೆ ವಾಸ್ತವವಾಗಿ ಜೀವಿಗಳಿಗೆ ಸಾವೇ ಇಲ್ಲ; ನಿಷ್ಕ್ರಿಯವಾಗುವುದದೇನಿದ್ದರೂ ಅದರ ದೇಹ ಮಾತ್ರ; ನಂತರ ಮತ್ತೊಂದು ದೇಹ ಧರಿಸುತ್ತದೆ ಎಂಬ ನಂಬಿಕೆಯೂ ಇದೆ. ಅದು ಪುನರಾವರ್ತನೆಯಾಗದಂತೆ ಮಾಡಿಕೊಳ್ಳುವುದೇ ನಿಜವಾದ `ಸಾವು' (ಮೋಕ್ಷ) ಎಂಬ ಮಾತೂ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

shaliniprasad's picture
ಮಂಗಳ, 01/12/2009 - 16:37 ರಂದು shaliniprasad ಅವರು ಹೇಳುತ್ತಾರೆ
"ಯಾರಿಗೆ ಯಾರುಂಟು ಎರವಿನ

"ಯಾರಿಗೆ ಯಾರುಂಟು ಎರವಿನ ಸಂಸಾರ......" ಎಂಬ ಹಾಡು ನೆನಪಿಗೆ ಬಂತು. ನಿಮ್ಮ ಕವನ ತುಂಬಾ ಅರ್ಥಗರ್ಭಿತವಾಗಿದೆ.ನಾವಿರುವಾಗ ಸಾವಿರುವುದಿಲ್ಲ, ಸಾವು ಬಂದಾಗ ನಾವಿರುವುದಿಲ್ಲ.ಅಲ್ಲವೇ...........

ಎಚ್.ಎಸ್. ಪ್ರಭಾಕರ's picture
ಮಂಗಳ, 01/12/2009 - 23:00 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಹೌದು ಶಾಲಿನಿಯವರೆ. ಒಳ್ಳೆಯ ಗೀತೆ

ಹೌದು ಶಾಲಿನಿಯವರೆ. ಒಳ್ಳೆಯ ಗೀತೆ ನೆನಪಿಸಿದ್ದಕ್ಕೆ ಧನ್ಯವಾದಗಳು. ನಾವಿರುವಾಗ ಸಾವಿರುವುದಿಲ್ಲ, ಸಾವು ಬಂದಾಗ ನಾವಿರುವುದಿಲ್ಲಎಂಬುದು ಹೃದಯ ತಟ್ಟುವ ಮಾತು. ಇದನ್ನೇ ಆಧಾರವಾಗಿಟ್ಟುಕೊಂಡು ಒಂದು ಕವನ ಕಟ್ಟಬಹುದಲ್ಲವೆ?

ಎಚ್.ಎಸ್. ಪ್ರಭಾಕರ's picture
ಸೋಮ, 23/11/2009 - 20:23 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಓ...! ಹಾಗಾದರೆ ನಾನು ಬರೆದದ್ದು

ಓ...! ಹಾಗಾದರೆ ನಾನು ಬರೆದದ್ದು ಸಾರ್ಥಕವಾಯಿತು?ಧನ್ಯವಾದಗಳು ಉಮಾಶಂಕರ್

ಉಮಾಶಂಕರ ಬಿ.ಎಸ್'s picture
ಸೋಮ, 23/11/2009 - 19:13 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ತಿಪ್ಪೆಯಲ್ಲೂ ಸಹ 'ಕಾಲನ'

ತಿಪ್ಪೆಯಲ್ಲೂ ಸಹ 'ಕಾಲನ' ಮಹಿಮೆಯನ್ನು ನಾವು ನೋಡಿದ್ದೇವೆ.
ನಿಮ್ಮ ಕವನ ಚಿಂತಿಸುವಂತಿದೆ

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 1 ಉತ್ತರ 10
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಪ್ರಭಾಕರ. ಎಚ್.ಎಸ್ ಪ್ರಭು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ಕನ್ನಡ ಭಾಷಾ ಪತ್ರಕರ್ತ. ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಹಾಸನ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪರಿಸರ ಸಂರಕ್ಷಣೆ, ಸಾಹಿತ್ಯ, ಸಂಗೀತ, ಭಾರತೀಯ ಸಂಸ್ಕೃತಿಗಳಲ್ಲಿ \ಆಸಕ್ತ ಹಾಗೂ ಸಕ್ರಿಯನೂ ಆಗಿದ್ದೇನೆ. ಲೇಖಕನೂ ಹೌದು.
ಇವರ ವಿಸ್ಮಯ ಪುಟ