ಕಾಲ ನಿರ್ಣಯ...

ಬರೆದವರು: ಕಿರಣ್.. - ಕಳುಹಿಸಿದ ದಿನ 20 June 2009

ಸುತ್ತಲೂ ಕಲ್ಲು ಕಟ್ಟೆಗಳಿಂದ ಸುತ್ತುವರೆದಿದ್ದ ಮುತ್ತಿನಕೆರೆಯನ್ನು ಇನ್ನೊಮ್ಮೆ ದಿಟ್ಟಿಸಿದೆ. ಅಷ್ಟು ಹೊತ್ತು ನನ್ನನ್ನು ನೋಡಿ ನಾನು ನೋಡಿದ ಪರಿಗೆ ಹೆದರಿದಂತೆ ಕಪ್ಪೆಯೊಂದು ಗುಳುಕ್ಕನೆ ಮುಳುಗಿತು. ಮೊದಲೆರಡು ಮಳೆಗೆ ಜಾರುತ್ತಿದ್ದ ನೆಲದ ಮೇಲೆ ಒಂದೊಂದೇ ಹೆಜ್ಜೆ ಇಡುತ್ತ ಮನೆಕಡೆ ನಡೆದೆ. ಊರ ಉಸಾಬರಿ ಇವರಿಗೆಲ್ಲ ಯಾಕೆ ಬೇಕು?? ಮನೆ ಆಳಿನಿಂದ ಹಿಡಿದು ಯಜಮಾನನ ತನಕ ಊರಲ್ಲೆಲ್ಲ ಅದೇ ಸುದ್ದಿ. ನಾನೊಬ್ಬ ತಲೆಕೆಡಿಸಿಕೊಳ್ಳದಿರಲು ಕಾರಣ ಎಲ್ಲವನ್ನು ಕಾಲ ನಿರ್ಣಯಿಸುತ್ತದೆ ಎಂಬ ನನ್ನ ಧೋರಣೆ. ಆ ಸುದ್ದಿಯ ವಲಯದಿಂದ ಒಂದಿಷ್ಟು ಹೊತ್ತು ತಪ್ಪಿಸಿಕೊಳ್ಳಲು ಮುತ್ತಿನ ಕೆರೆಯೆಡೆಗೆ ಹೋಗಿದ್ದೆ. ಗೊತ್ತಿತ್ತು ನನಗೆ, ಮನೆ ಮೆಟ್ಟಿಲು ತುಳಿಯುತ್ತಿದ್ದ ಹಾಗೆ ಅದೇ ವಿಷಯ ಯಾವುದಾದರೂ ರೂಪದಲ್ಲಿ ಹೊರ ಬರುತ್ತದೆ ಅಂತ.

"ಅಲ್ಲಾ ಸಾಮಿ, ಟಿ.ವಿ. ನಾಗೆ ತೋರ್ಸೋ ಪಿಚ್ಚರ್ ನಲ್ಲಿ ಹೀರೋ ಹೀರೋಯಿನ್ ಮಾಡಿದ್ ಹಂಗೆ ಮಾಡ್ಬುಡ್ತಾರಲ್ಲ ಅಲ್ವರ?" ಎಂಕಟಿ ಮಾತು ತಿರುಗಿ ನೋಡುವ ಹಾಗೆ ಮಾಡಿತು. ವೆಂಕಟರಮಣ ಅನ್ನೋ ಸುಂದರ ಹೆಸರಿನ ಕಟ್ಟುಮಸ್ತು ಆಳು ಊರವರ ಬಾಯಲ್ಲಿ 'ಎಂಕಟಿ' ಆಗಿದ್ದ.
"ಹಾಗಾದ್ರೆ ಅವರಿಬ್ರನ್ನು ಹೀರೋ ಹೀರೋಯಿನ್ ಅಂತ ಒಪ್ಕೊಂಡೆ ಅನ್ನು" ನಸುನಕ್ಕು ಹೇಳಿದೆ.
"ಹಂಗಲ್ಲರ, ಈಗಿನ್ ಕಾಲದ್ ಐಕ್ಲಿಗೆ ಬುದ್ದಿನೆ ಇಲ್ಲ, ನಮ್ ಕಾಲದಾಗೆ..." ಗತಕಾಲದ ವೈಭವ ಶುರು ಮಾಡಿದ ಎಂಕಟಿ.
" ಎಂಕಟಿ ನಿಲ್ಸು ಮಾರಾಯ. ನಿನ್ನ ಕಾಲದ್ ಕತೆ ಈಗ ಬೇಡ. ಈಗ ಕಾಲ ಬೇರೆ.ನಿಮ್ಮ ಕಾಲದಲ್ಲಿ ಪೋಲಿಸ್ ರು ಚಡ್ಡಿ ಹಾಕ್ತಿದ್ರು ಅಂತಾ ಈಗ ಹಾಕ್ತಿದಾರ??ಹಾಗೆ ಇದು. ಎಲ್ಲ ಕಾಲ ನಿರ್ಣಯ ಮಾಡುತ್ತೆ." ವೇದಾಂತಿಯಂತೆ ಮಾತನಾಡುತ್ತಾ ಸೂಕ್ಷ್ಮವಾಗಿ ಅವನ 'ಗತಕಾಲ' ಮತ್ತು ಈಗಿನ ಕಾಲದ ನಡುವಿನ ವ್ಯತ್ಯಾಸ ತಿಳಿಸಿದೆ.
" ಅದು ಹೌದ್ರ.." ತಲೆಕೆರೆದ ಎಂಕಟಿ ಬಲಗಡೆ ತೋಟದ ಕಾಲುಗೆಯಲ್ಲಿ ಹಾರಿ ಮರೆಯಾದ.

"ಅವ್ರು ತಿಮ್ಮಣ್ಣನ ಮನೆಗೆ ಹೋಗಿದಾರೆ. ನೀನೂ ಅಲ್ಲಿಗೆ ಬರಬೇಕಂತೆ. ಹಾಗೆ ಹೋಗ್ತಾ ನೆನಪುಮಾಡಿ ಹಾಲಿನ ಕ್ಯಾನು ಹಿಡ್ಕೊಂಡು ಹೋಗು" ಅಮ್ಮನಅಪ್ಪಣೆಯಾಯಿತು.
" ತಿಮ್ಮಣ್ಣನ ಮನೇಲಿ ಎಂತಾ ವಿಶೇಷ??" ಕೇಳಿದೆ.
" ಆ ಮನೆಲೆಂತ ವಿಶೇಷ ಈಗ. ಅದೇ ಕೂಸಿನ ಪಂಚಾಯ್ತಿ." ಚಹಾ ಕ್ಕೆ ನೀರಿಡುತ್ತ ಅಮ್ಮ ಹೇಳಿದರು.
"ಆ ಹುಡುಗಿನೇ ಇಲ್ಲ ಅಂದ್ಮೇಲೆ ಅದೆಂತ ಪಂಚಾಯ್ತಿ ಈಗ??" ಪಂಚಾಯ್ತಿಯ ಕಾರ್ಯವೈಖರಿ ಅರ್ಥವಾಗದೆ ಅಮ್ಮನೆಡೆಗೆ ನೋಡಿದೆ.
" ಅದೆಂತದೋ ಮಾರಾಯ, ಏನು ಮಾತುಕತೆ ಅಂತ ಅಲ್ಲೇ ಹೋಗಿ ಕೇಳು. ಎಷ್ಟು ಪಚೀತಿ ನೋಡು ಆ ಕೂಸಿಂದಾ. ನಾನು ಮೊದ್ಲೇ ಹೇಳಿದ್ದೆ.."ದೋಸೆಯನ್ನು ಪ್ಲೇಟ್ ನಲ್ಲಿ ಹಾಕಿ ನನ್ನತ್ತ ತಳ್ಳುತ್ತ ಅಮ್ಮ ಶುರುಮಾಡಿದರು.
"ಹೋದ ಹುಡುಗಿಗೆ ಬೈದು ಏನು ಪ್ರಯೋಜನ ಅಮ್ಮ, ಬಿಡು" ಒಂದು ರೀತಿ ನಿರ್ಲಕ್ಷದಿಂದ ನುಡಿದೆ.
" ನಿನಗೇನು ಗೊತ್ತಾಗುತ್ತೋ ಹೆತ್ತವರ ಕಷ್ಟ, ನೋಡು ಈಗ ತಿಮ್ಮಣ್ಣ ನ ಪರಿಸ್ಥಿತಿ" ಅಮ್ಮನ ಅನುಕಂಪದ ಮಾತು ಸಿಟ್ಟಿನ ಧಾಟಿಯಲ್ಲಿ ಹೊರಬಂತು.
ದೋಸೆ ತಿಂದು, ಚಹಾ ಕುಡಿದವನೇ ಊರಿನ ಸಂಪ್ರದಾಯದಂತೆ ಲುಂಗಿ ಬಿಗಿದು ಹಾಲಿನ ಕ್ಯಾನು ಹಿಡಿದು ತಿಮ್ಮಣ್ಣ ನ ಮನೆಯ ದಾರಿಗೆ ಮುಖ ಮಾಡಿದೆ.

ತಿಮ್ಮಣ್ಣ ನ ಮನೆ ಸೇರಿ ಆರು ಮನೆಗಳ ಒಟ್ಟು ಹೆಸರು 'ತಾಳೆ ಹಳ್ಳಿ' . ಒಂದಾನೊಂದು ಕಾಲದಲ್ಲಿ ತಾಳೆ ಮರಗಳು ಹೆಜ್ಜೆ ಹೆಜ್ಜೆಗೆ ಇದ್ದವೆಂದೂ, ಅದಕ್ಕೆ ಹಳ್ಳಿಗೆ ಈ ಹೆಸರು ಬಂತೆಂದೂ ಹೇಳುವ ಮಾತಿಗೆ ಪುರಾವೆಯಾಗಿಯಾದರೂ ಒಂದೂ ತಾಳೆ ಮರವಿರಲಿಲ್ಲ. ತನ್ನದೇ ಆದ ಕಟ್ಟುಪಾಡು , ಸಂಪ್ರದಾಯ ಬೆಳೆಸಿಕೊಂಡಿದ್ದ ಈ ನಾಡಿನಲ್ಲಿ ಪ್ರಪ್ರಥಮವಾಗಿ ಎಲ್ಲವನ್ನು ಮುರಿದು ಒಮ್ಮೆಲೇ ಎಲ್ಲರು ಬೆಚ್ಚಿಬೀಳುವಂತೆ ಮಾಡಿದ್ದು ತಿಮ್ಮಣ್ಣ ಮಗಳು ಸುಧಾ. ಒಬ್ಬಳೇ ಮಗಳು, ವಯಸ್ಸಿಗೆ ಬಂದವಳು, ನಾಲ್ಕೂರಿಗೆ ಗೊತ್ತಾಗುವಂತೆ ಮಾಡುವೆ ಮಾಡಬೇಕೆಂದು ಕನಸುಕಂಡ ತಿಮ್ಮಣ್ಣ ನಿಗೆ , ಸುತ್ತ ನಾಲ್ಕು ಮನೆಗೆ ಗೊತ್ತಾಗದಂತೆ ಪತ್ರದ ಪರಮೇಶಿ ಜೊತೆ ಓಡಿಹೋಗಿದ್ದಳು 'ಸುಧಾ'. ಹಿರಿಯರ ಮಾತಿಗೆ ತಲೆ ಅಲ್ಲಾಡಿಸಿ , ಮನೆಗೆ ಬಂದವರಿಗೆ ತಲೆ ತಗ್ಗಿಸಿಯೇ ನೀರು ಕೊಡುತ್ತಿದ್ದ ಸುಧಾ, ಸುತ್ತ ನಾಲ್ಕೂರಿನಲ್ಲಿ ತನ್ನ ದೊಡ್ಡ ಮೀಸೆ ತಿರುವುತ್ತ ತಲೆಯೆತ್ತಿ ನಡೆಯುತ್ತಿದ್ದ ತಿಮ್ಮಣ್ಣ ತಲೆತಗ್ಗಿಸುವಂತೆಮಾಡಿದ್ದಳು.
ಆ ಪತ್ರದ ಪರಮೇಶಿಯೋ ತಿಮ್ಮಣ್ಣ ನ ಅಕ್ಕನ ಮನೆಗೆ ಪತ್ರ ತಂದು ಕೊಟ್ಟು ಕಿಸಕ್ಕನೆ ಹಲ್ಲು ಕಿಸಿಯುತ್ತಿದ್ದವ. ಸತ್ಯನಾರಾಯಣ ಪೂಜೆ ಎಂದು ಅತ್ತೆ ಮನೆಗೆ ಹೋಗಿದ್ದಳಂತೆ ಸುಧಾ. ಪತ್ರದ ಪರಮೇಶಿ ಅದೆಷ್ಟು ಪತ್ರ ಬರೆದು ಬಿಟ್ಟನೋ ಸುಧಾಳಿಗೆ, ಟಿ.ವಿ.ಯಲ್ಲಿ ನೋಡಿದ್ದ 'ಲವ್' ಎಂಬ ಭಯಂಕರ ಪಿಡುಗಿಗೆ ತಾನೂ ತುತ್ತಾಗಿದ್ದಳು . ಮಾವನಿಗೆ ದಿನವೂ ಪತ್ರ ಬರುವುದು ಮಾಮೂಲು. ಯಾವುದೇ ದೇವಸ್ತಾನಕ್ಕೆ ಹೋದರೂ ಅಲ್ಲಿ ರಸೀತಿ ಹರಿಸಿ ವರ್ಷದಲ್ಲಿ ಇಂತ ದಿನ ನನ್ನ ಹೆಸರಿನಲ್ಲಿ ಪೂಜೆಯಾಗಬೇಕೆಂದು ಬರೆಸುತ್ತಿದ್ದ. ಅದರದ್ದೇ ಪತ್ರಗಳು ಹೆಚ್ಚಾಗಿ ಬರುತ್ತಿದ್ದವು. ಪರಮೇಶಿ, ದೇವಸ್ಥಾನದಿಂದ ಬಂದ ದೇವರ ಪತ್ರದ ಜೊತೆ ತನ್ನ ದೇವತೆಗೂ ಪತ್ರಗಳನ್ನು ಬರೆದಿದ್ದ. ಅಪ್ಪನ ದರ್ಪ, ಅಮ್ಮನ ಮೌನ ಗಳನ್ನೇ ನೋಡಿ ತಿಳಿದಿದ್ದ ಸುಧಾ, ಕವಿಪುಂಗವ ಪರಮೇಶಿಯ ಪ್ರೀತಿಯ ಮಾತಿಗೆ ಮರುಳಾಗಿದ್ದಳು.ಹೆಚ್ಚೆಂದರೆ ಇಪ್ಪತ್ತು ದಿನಗಳ ಪ್ರೀತಿ ಓಡಿಹೊಗುವುದರೊಂದಿಗೆ ಮುಕ್ತಾಯಗೊಂಡಿತ್ತು, ಇತ್ತ ತಿಮ್ಮಣ್ಣ ನ ಗೋಳಿನ ಕತೆ ಶುರುವಾಗಿತ್ತು.
ದಣಪೆಯನ್ನು ಸರಿಸಿ ತಿಮ್ಮಣ್ಣ ಮನೆಗೆ ಒಳ ಅಡಿಯಿಡುತ್ತಿದ್ದಂತೆ ವಿಚಿತ್ರವಾದ ಮೌನ ನನ್ನನ್ನು ಸ್ವಾಗತಿಸಿತು. ಹಾಲಿನ ಕ್ಯಾನನ್ನು ಒಂದು ಬದಿಗಿಟ್ಟು ಎತ್ತಿ ಕಟ್ಟಿದ್ದ ಲುಂಗಿಯನ್ನು ಕೆಳಕ್ಕೆ ಬಿಟ್ಟು ಅಲ್ಲೇ ದ್ಯಾಪಣ್ಣನ ಪಕ್ಕ ಆಸೀನನಾದೆ. ಅಪ್ಪ ಅಲ್ಲೇ ಕುಳಿತಿದ್ದರು. ಎಲ್ಲರನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದೆ. ಅಷ್ಟು ಹೊತ್ತು ಸುಮ್ಮನೆ ಕುಳಿತಿದ್ದ ಮಹಾನುಭಾವರೆಲ್ಲರು ಸಣ್ಣಗೆ ಮಾತು ಶುರುಮಾಡಿದ್ದರು.
"ದ್ಯಾಪಣ್ಣ ಎಂತಕೆ ಪಂಚಾಯ್ತಿ?? ಆ ಕೂಸೇ ಇಲ್ಲ!!" ಅಂದೆ.
"ಪಂಚಾಯ್ತಿ ಅಲ್ವೋ. ತಿಮ್ಮಣ್ಣ ನಿಗೆ ಸಾಂತ್ವನ ಹೇಳ್ಬೇಕು ಅಂತಾ ಬಂದಿರೋದು ಎಲ್ಲರೂ"ಅಂದ ದ್ಯಾಪಣ್ಣ.
ಜೋರಾಗಿ ನಗಬೇಕು ಅನ್ನಿಸಿತು. ಸಾಂತ್ವನವನ್ನು ಹೀಗೂ ಹೇಳ್ತಾರ ಎಂದು ನನಗೆ ನಾನೇ ಕೇಳಿಕೊಂಡೆ.ಮೊದಲಿಗೆ ಊರ ಹಿರಿಯರು ಮಾತಿಗೆ ಶುರು ಮಾಡಿದರು. ವಯಸ್ಸಿನ ದೃಷ್ಟಿಯಿಂದ ಊರ ಹಿರಿಯ ನಾಗರೀಕರು ಎನ್ನಬಹುದಾಗಿತ್ತೆ ಹೊರತು ಇನ್ಯಾವ ವಿಷಯದಲ್ಲೂ ಹಿರಿಯರಾಗಿ ನನಗವರು ತೋರುತ್ತಿರಲಿಲ್ಲ. ಮತ್ತೆ ಮೊದಲಿನಿಂದ ಕತೆ ಹೇಳಿ "ಆಗಿದ್ದು ಆಯಿತು ತಿಮ್ಮಣ್ಣ, ಎಲ್ಲ ಮರೆತು ಸಂತೋಷವಾಗಿರು" ಎಂದು ಮಾತಿಗೆ ವಿರಾಮ ಹಾಕಿದರು. ಮುಂದಿನ ಹತ್ತು ನಿಮಿಷ ತಿಮ್ಮಣ್ಣ ನ ಮಾತು ದುಃಖದ ರೂಪದಲ್ಲಿ ಹೊರಬಂತು. ಅವನ ಮಾತು ಕೇಳಿದರೆ ಮಗಳು ಓದಿಹೊಗಿದ್ದಕ್ಕಿಂತ , ಅವನ ಪ್ರತಿಷ್ಟೆಗೆ ಕುತ್ತು ಬಂತು ಎಂಬುದೇ ದೊಡ್ಡ ವಿಷಯ ಎನಿಸುತ್ತಿತ್ತು.
ಇದೆಲ್ಲದರ ನಡುವೆ ಬಾಗಿಲ ಸಂದಿಯಲ್ಲಿ ನಿಂತು ಮೌನವಾಗಿ ಬಿಕ್ಕಳಿಸುತ್ತಿದ್ದ ಭಾಗಕ್ಕ ನನ್ನ ಕಣ್ಣಿಗೆ ತನ್ನತನವೇ ಇಲ್ಲದ ಕೈಗೊಂಬೆಯಂತೆ ಕಂಡಳು. ಹುಟ್ಟಿದಾಗಿನಿದಲೂ ಸಂಪ್ರದಾಯ, ಸಂಪ್ರದಾಯ ಎಂದು ಬೆಳೆದ ಭಾಗಿರಥಿ, ತಿಮ್ಮಣ್ಣ ನ ಮದುವೆಯಾಗಿ ಮತ್ತದೇ ಸಂಪ್ರದಾಯದ ಬೇಲಿಯೊಳಗೆ ಸಿಕ್ಕಿಬಿದ್ದಿದ್ದಳು. ಎಂದೂ ಜೋರಾಗಿ ಮಾತನಾಡದ ಭಾಗಕ್ಕನನ್ನು ನಾನೊಬ್ಬನೇ ಗಮನಿಸುತ್ತಿರುವುದು ಎಂಬುದೂ ನನ್ನ ಅರಿವಿಗೆ ಬಂತು. ಜೋರಾಗಿ ಅಳುವ ಸದ್ದು ನನ್ನನ್ನು ತಿಮ್ಮಣ್ಣ ನೆಡೆಗೆ ತಿರುಗುವಂತೆ ಮಾಡಿತು.
" ಎಷ್ಟು ಮುದ್ದಾಗಿ ಬೆಳೆಸಿದ್ದೆ, ಏನೇನೋ ಕನಸು ಇಟ್ಕೊಂಡಿದ್ದೆ, ನಮ್ಮ ಮನೆತನದ ಮಾನ ಮರ್ಯಾದೆ ಎಲ್ಲವನ್ನು ಹಾಳುಮಾಡಿದಳು ಬೇವರ್ಸಿ, ಅಯ್ಯೋ ಶಿವನೆ ಯಾಕೆ ಹೀಗೆ ಮಾಡಿದ್ಯೋ??" ಎಂದು ಜೋರಾಗಿ ಕೂಗುತ್ತಾ ತಿಮ್ಮಣ್ಣ ತನ್ನ ಸ್ತಿಮಿತ ಕಳೆದುಕೊಂಡವನಂತೆ ತೋರುತ್ತಿದ್ದ.
"ತಿಮ್ಮಣ್ಣ ಸುಧಾಳಿಗೆ ಪ್ರೀತಿ ಬೇಕಿತ್ತು ಕಣೋ, ನೀನು ದುಡ್ಡಿನಿಂದ ಬೆಳೆಸಿದೆ ಅವಳನ್ನ, ಸ್ವಲ್ಪ ಪ್ರೀತಿ ಕೊಟ್ಟಿದ್ರೆ.." ಎಂದು ಹೇಳಬೇಕು ಅನ್ನಿಸಿತು. ಬಂದ ಜನರೆಲ್ಲ ತಮಗೆ ತೋಚಿದ ರೀತಿ ಸಾಂತ್ವನ ಹೇಳಿ ಕರಗುತ್ತಿದ್ದಂತೆ ನಾನೂ ಅಪ್ಪನ ಜೊತೆ ಮನೆ ದಾರಿ ಹಿಡಿದೆ.
ಮರುದಿನ ಬೆಳಿಗ್ಗೆ ಸೂರ್ಯನ ಬಿಸಿಲಿಗೆ ಮುಖವೊಡ್ಡುತ್ತಿದ್ದಂತೆ ಎಂಕಟಿ ತೋಟದ ಬೇಲಿ ಹಾರಿಬಂದು "ತಿಮ್ಮಣ್ಣ ನೋರು ಬೇಣದಾಗೆ ಬೂತಪ್ಪನ ಆಲದ ಮರಕ್ಕೆ ನೇಣು ಹಾಕ್ಕಂಡವರೆ "ಎಂದು ಕೂಗತೊಡಗಿದ.ಅಪ್ಪ ಉಟ್ಟಬಟ್ಟೆಯಲ್ಲೇ ಎಂಕಟಿ ಜೊತೆ ಓಡಿದರು. ನಾನು ನಿಧಾನಕ್ಕೆ ಮುತ್ತಿನಕೆರೆಯೆಡೆಗೆ ನಡೆದೆ. ಕೆರೆಯನ್ನು ದಿಟ್ಟಿಸಿ ನೋಡುತ್ತಿದ್ದಂತೆ ಸುಧಾಳ ನಗುಮೊಗ, ತಿಮ್ಮಣ್ಣ ನ ಮೀಸೆ ಕಣ್ಣೆದುರು ಮಿಂಚಿ ಮರೆಯಾದಂತೆ ಭಾಸವಾಯಿತು. 'ಕಾಲ ನಿರ್ಣಯ' ಪದ ಕಿವಿಯಲ್ಲಿ ಗುಯ್ಗುಡತೊಡಗಿತು....

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಸತ್ಯನಾರಾಯಣ.ಪಂಡಿತ್'s picture
ಗುರು, 18/03/2010 - 19:35 ರಂದು ಸತ್ಯನಾರಾಯಣ.ಪಂಡಿತ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕಾಲ ನಿರ್ಣಯ...

ತುಂಬಾ ಚೆನ್ನಾಗಿ ಬರೆದಿದ್ದೀರ ಕಿರಣ್, ಸಾಮಾಜಿಕ ಕಟ್ಟುಪಾಡು ನಮ್ಮನ್ನು ಎಷ್ಟರ ಮಟ್ಟಿಗೆ ಹಿಡಿದಿಟ್ಟಿವೆ ಎನ್ನುವುದು ನಿಮ್ಮ ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.

ಸತ್ಯನಾರಾಯಣ.ಪಂಡಿತ್'s picture
ಗುರು, 18/03/2010 - 19:35 ರಂದು ಸತ್ಯನಾರಾಯಣ.ಪಂಡಿತ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕಾಲ ನಿರ್ಣಯ...

ತುಂಬಾ ಚೆನ್ನಾಗಿ ಬರೆದಿದ್ದೀರ ಕಿರಣ್, ಸಾಮಾಜಿಕ ಕಟ್ಟುಪಾಡು ನಮ್ಮನ್ನು ಎಷ್ಟರ ಮಟ್ಟಿಗೆ ಹಿಡಿದಿಟ್ಟಿವೆ ಎನ್ನುವುದು ನಿಮ್ಮ ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.

ವಿಕ್ರಂ's picture
ಮಂಗಳ, 23/06/2009 - 15:51 ರಂದು ವಿಕ್ರಂ ಅವರು ಹೇಳುತ್ತಾರೆ
ಚೆನ್ನಾಗಿ ಬರ್ದಿದ್ದೀರಾ ಕಿರಣ್

ಚೆನ್ನಾಗಿ ಬರ್ದಿದ್ದೀರಾ ಕಿರಣ್ Cool Smile

ಕಿರಣ್..'s picture
ಮಂಗಳ, 23/06/2009 - 21:34 ರಂದು ಕಿರಣ್.. ಅವರು ಹೇಳುತ್ತಾರೆ
ಧನ್ಯವಾದಗಳು ವಿಕ್ರಂ....

ಧನ್ಯವಾದಗಳು ವಿಕ್ರಂ....

shilpa1_4u@yahoo.com's picture
ಶನಿ, 20/06/2009 - 15:49 ರಂದು shilpa1_4u@yahoo.com ಅವರು ಹೇಳುತ್ತಾರೆ
ಚೆನ್ನಾಗಿದೆ.ಹಳ್ಳಿಯ ಜನರ ರೀತಿ -

ಚೆನ್ನಾಗಿದೆ.ಹಳ್ಳಿಯ ಜನರ ರೀತಿ - ರೀವಾಜು ,ಆಚಾರ -ವಿಚಾರ ತಿಳಿಸುವಂತಿತ್ತು.

ಕಿರಣ್..'s picture
ಮಂಗಳ, 23/06/2009 - 12:24 ರಂದು ಕಿರಣ್.. ಅವರು ಹೇಳುತ್ತಾರೆ
ಧನ್ಯವಾದಗಳು ಶಿಲ್ಪಾ ಅವರೆ...

ಧನ್ಯವಾದಗಳು ಶಿಲ್ಪಾ ಅವರೆ...

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
8 ಕೂಡಿಸು ಉತ್ತರ 16
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.