ಕಿಂದರಿಜೋಗಿಯ ಇಲಿಗಳು

ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 11 May 2009

ಮ್ಮ ಬಸ್ಸು ನಗರದ ಪರಿದಿಯೊಳಕ್ಕೆ ಬರುತ್ತಿದ್ದಂತೆಯೇ ಶುರುವಾದ ಜನರ ಓಡಾಟ, ವಾಹನ ದಟ್ಟಣಿ, ಧೂಳು ಎಲ್ಲವನ್ನೂ ನೋಡಿ ಕಿಟಕಿ ಪಕ್ಕ ಕುಳಿತ್ತಿದ್ದ ನನ್ನಮ್ಮ ಅಚ್ಚರಿಯಿಂದ ಉದ್ಗರಿಸಿದಳು. “ಅಲ್ಲಾ, ಈ ಪಾಟಿ ಜನ ಎಲ್ಲಿಂದ ಬರ್ತಾರೆ? ಏನು ಮಾಡ್ತಾರೆ?” ನಾನು ಉತ್ತರಿಸಿದೆ,
“ಎಲ್ಲಿಂದ ಬರ್ತಾರೆ ಅಂದ್ರೆ? ನಾವುಗಳು ಬಂದಿಲ್ವಾ ಹಾಗೇ! ಬೇರೆ ಬೇರೆ ಊರುಗಳಿಂದ ಕೆಲ್ಸ ಹುಡುಕ್ಕೊಂಡು ಬರ್ತಾರೆ ಅಷ್ಟೇ! ಬೆಂಗಳೂರಿನಲ್ಲಿ ಏನು ಕೆಲ್ಸ ಮಾಡಿಯಾದ್ರೂ ಹೊಟ್ಟೆ ತುಂಬಿಸ್ಕೋಬಹುದು”
“ಅದೂ ನಿಜಾ ಅನ್ನು. ನಮ್ಮ್ ಊರ್ಕಡೆ ಮಳೆಬೆಳೆ ಎಲ್ಲ ಕಮ್ಮಿಯಾಗ್ತಿದೆ, ಗದ್ದೆ ಹೊಲ ಮಾಡೋವ್ರಿಗೇ ತಿನ್ನೋಕೆ ಅನ್ನ ಇಲ್ಲ ಅನ್ನೋ ಹಾಗಾಗಿದೆ, ಇನ್ನೇನು ಮಾಡೋದು, ಕೆಟ್ಟು ಪಟ್ಟಣ ಸೇರು ಅನ್ನೋ ಹಾಗೆ ಎಲ್ಲ್ರೂ ಬೆಂಗಳೂರು, ಬಾಂಬೇ, ದುಬಾಯಿ ಅಂತ ಹೋಗಿ ಬಿಡ್ತಾರೆ!” ಅವಳ ದುಬಾಯಿ ಜ್ಞಾನದ ಬಗ್ಗೆ ಬೆರಗಾಗಿ ನಾನು ಕೇಳಿದೆ, “ದುಬಾಯಿಗೆ ಅಂತಾ ಹೆಂಗೊತ್ತು ನಿಂಗೆ? ಯಾರು ಹೋಗಿದಾರೆ?”
“ಓ ಅದೇನ್ ಬಿಡು! ನಿಮ್ಮ ಸಣ್ಣತ್ತೆ ತಂಗಿಯಂದಿರು, ಅವರ ಗಂಡಂದಿರೆಲ್ಲ ದುಬಾಯಿಗೇ ಹೋಗಿರೋದು, ಅಲ್ಲೇ ಇನ್ನೊಂದು ದೇಶ ಇದೆಯಲ್ಲ ಮೀಸ್ಕಟ್ ಅಂತ, ಅಲ್ಲಿಗೂ ಕೆಲವರು ಹೋಗಿದಾರೆ!” ನಾನು ನಕ್ಕು ಅವಳನ್ನು ತಿದ್ದಿದೆ, “ಮೀಸ್ಕಟ್ ಅಲ್ಲ ಅದು ಮಸ್ಕತ್...”
ಬಸ್ಸಿಳಿದು ಆಟೋ ಹಿಡಿಯೋಣ ಎನ್ನುವಷ್ಟರಲ್ಲಿ ನಮ್ಮ ಪಕ್ಕಕ್ಕೇ ಒಂದು ಆಟೋ ಬಂದು ನಿಂತಿತು. ಆಟೋ ಡ್ರೈವರ್ ಅಮ್ಮನನ್ನುದ್ದೇಶಿಸಿ “ಏನಕ್ಕಾ ಅಂತೂ ಮಗನ ನೋಡೋ ನೆಪದಲ್ಲಿ ಬೆಂಗಳೂರು ಮುಖ ನೋಡಿಬಿಟ್ಟೆ ಅನ್ನು?” ಅಂದ. ನಮ್ಮಮ್ಮ ಅವನೆಡೆಗೆ ಪರಿಚಯದ ನಗೆ ಬೀರಿದಳು. ಆ ಆಟೋ ಡ್ರೈವರ್ ನಮ್ಮ ಹಳ್ಳಿಯವನೇ ಆಗಿದ್ದ, ನಾವಿಬ್ಬರೂ ಅದೇ ಆಟೋ ಹಿಡಿದು ನನ್ನ ರೂಮಿಗೆ ಬಂದೆವು.

ರೂಮಿಗೆ ಬಂದಾಗ ಅಮ್ಮ ಆ ಆಟೋ ಡ್ರೈವರ್ ಬಗ್ಗೆ ಹೇಳಿದಳು, ಅವನು ನಮ್ಮ ಹಳ್ಳಿಯವನೇ. ಬೀಯೆಡ್ ಓದಿ, ಕೆಲಸ ಸಿಗದೇ ಊರಲ್ಲೇ ಆಟೋ ಓಡಿಸಿಕೊಂಡಿದ್ದಾತನಿಗೆ ಬೆಂಗಳೂರಿನ ಹುಡುಗಿಯೊಂದಿಗೆ ಮದುವೆ. ಅವನ ಮಾವನ ಕಡೆಯವರು ಇಲ್ಲೇ ಬಂದು ಕೆಲಸ ಹುಡುಕಿಕೊಳ್ಳಿ ಅಂದು ಇವನು ಸಂಕೋಚ ಪಟ್ಟುಕೊಂಡದ್ದಕ್ಕೆ ಅವರೇ ಆಟೋ ತೆಗೆಸಿಕೊಟ್ಟು, ಕೆಲಸ ಸಿಗೋವರೆಗೂ ನಿಮ್ಮ ಅನ್ನ ನೀವೇ ದುಡಿದುಕೊಳ್ಳಿ ಅಂದರಂತೆ. ಈಗಿವನು ಬೆಂಗಳೂರು ಯಾಕೋ ಸೆಟ್ಟಾಗಲಿಲ್ಲ ವಾಪಸ್ಸು ಹೆಂಡತಿಯನ್ನೂ ಕರೆದುಕೊಂಡು ಊರಿಗೆ ಹೋಗ್ತೀನಿ ಅಂತಿದಾನಂತೆ. “ಬೆಂಗಳೂರಲ್ಲಿ ಇರದ ದುಡಿಮೆ ಇನ್ನೆಲ್ಲಿದ್ದೀತು ಬಿಡು, ಕೈಲಿ ಹರಿಯಲಾರದವರು ಅಷ್ಟೇ ಬೆಂಗಳೂರು ಬಿಟ್ಟು ವಾಪಸ್ಸು ಹೋಗೋದು. ನಮ್ಮೂರಲ್ಲಿ ಇದರ ಒಂದು ಪಾಲಾದರೂ ದುಡಿಯೋಕೆ ಆಗುತ್ತಾ?” ಅಂತ ಬೆಂಗಳೂರಿನ ಪರ ವಕಾಲತ್ತು ಮಾಡಿದಳು.

ಮೂರು ವರ್ಷದ ಹಿಂದೆ ನಾನು ಮತ್ತು ನನ್ನಿಬ್ಬರು ಸ್ನೇಹಿತರು ಉದ್ಯೋಗಾರ್ಥಿಗಳಾಗಿ ಬೆಂಗಳೂರಿಗೆ ಬಂದ ಹೊಸತರಲ್ಲಿ, ಬರೀ ಒಂದೂವರೆ ಸಾವಿರಕ್ಕೆ ನಗರದ ಹೃದಯ ಭಾಗದ ಸಣ್ಣ ಖೋಲಿಯಲ್ಲಿ ಬಾಡಿಗೆ ಹಿಡಿದಿದ್ದ ನನ್ನ ಸಣ್ಣರೂಮು ನೋಡಿ ಅಮ್ಮ ಸೋಜಿಗಗೊಂಡಳು; “ಇಷ್ಟು ಸಣ್ಣ ರೂಮಿಗೆ ಬಾಡಿಗೆ ಎರಡು ಸಾವಿರವಾ?” ಅಂದಳು; ಆಮೇಲೆ “ಬೆಂಗಳೂರಲ್ಲಿ ಇಷ್ಟು ಕೊಡಲೇ ಬೇಕು ಬಿಡು...” ಅಂತ ತನಗೆ ತಾನೆ ಸಮಾಧಾನ ಮಾಡಿಕೊಂಡಳು;

ಅಮ್ಮ ಬಂದಿದುದರಿಂದ ನಮಗೆಲ್ಲ ನಮ್ಮ ಕೈಸುಟ್ಟುಕೊಳ್ಳುವ ಮನೆಕೆಲಸದ ಗೊಡವೆ ತಲುಪಿತು. ಬೆಳಿಗ್ಗೆ ಏಳಕ್ಕೆ ಏಳುತ್ತಲೂ ಸ್ನಾನಕ್ಕೆ ಬಿಸಿನೀರು, ಆದಕೂಡಲೇ ಹಾಲು−ಕಾಫಿ, ಅದಾದ ನಂತರ ನಾವು ಆಫೀಸಿಗೆ ಹೊರಡುವಷ್ಟರಲ್ಲಿ ತರಹೇವಾರಿ ತಿಂಡಿಗಳು, ಸಂಜೆ ಕಾಫಿ, ರಾತ್ರಿ ಊಟ! ತಿಂಗಳುಗಳಿಂದ ಧೂಳು ಹಿಡಿದ ಮೂಲೆಗಳೆಲ್ಲ, ಕರೆಗಟ್ಟಿದ ಸ್ಟವ್‌ಗಳೆಲ್ಲ ಕಾಯಕಲ್ಪ ಪಡೆದುಕೊಂಡು ಫಳಫಳಿಸಿದವು.

ಅಮ್ಮ ಬಂದದ್ದು ನಮ್ಮ ರೂಮಿನಲ್ಲಿ ಇತ್ತೀಚೆಗೆ ಸೇರಿಕೊಂಡು ಅವ್ಯಾಹತವಾಗಿ ಧಾಂದಲೆ ನಡೆಸುತ್ತಿದ್ದ ಎರಡು ಇಲಿಗಳಿಗೆ ಸಂಕಷ್ಟಕ್ಕಿಟ್ಟುಕೊಂಡಿತು. ಎರಡೇ ಇಲಿಗಳಿವೆ ಅಂತ ಗೊತ್ತಾಗಿದ್ದೂ ನನ್ನ ಸ್ನೇಹಿತ ‘ಚೇತನ್’ನ ಸಂಶೋಧನೆಯಿಂದಾಗಿ! ನಾನೂ ಅವನೂ, ಇನ್ನೊಬ್ಬ ಸ್ನೇಹಿತ ‘ಶಿವು’ನೂ ಸೇರಿಕೊಂಡು ಅವೆರಡು ಇಲಿಗಳನ್ನೂ ಹಿಡಿಯಲು ಏನೆಲ್ಲ ಪ್ರಯತ್ನ ಮಾಡಿದ್ದೆವು, ಸಫಲರಾಗಿರಲಿಲ್ಲ. ಅಮ್ಮನ ಮೇಲ್ವಿಚಾರಣೆಯ ಅಡಿಗೆಮನೆಯಲ್ಲಿ ಆ ಇಲಿಗಳಿಗೆ ಹಿಂದಿನ ಹಾಗೆ ಬಿಡುಬೀಸಿನ ಪ್ರವೇಶ ಸಿಕ್ಕುತ್ತಿರಲಿಲ್ಲ. ಬಂದ ಎರಡು ದಿನಗಳಲ್ಲೇ ಅವುಗಳು ಅಡಿಗೆ ಮನೆಯ ಸಿಂಕಿನೊಳಗಿಂದ ಬರುತ್ತವೆ ಅಂತ ಕಂಡು ಹಿಡಿದ ಅಮ್ಮ ಸಿಂಕಿನ ಕೊಳವೆಗೆ ದಪ್ಪದೊಂದು ಬ್ಯಾಂಡೇಜು ಸುತ್ತಿದ್ದಳು, ಆದರೂ ಅವು ಯಾವ ಮಾಯದಲ್ಲೋ ಅಮ್ಮನ ಕಣ್ಣುತಪ್ಪಿಸಿ ಕಳ್ಳತನ ನಡೆಸುತ್ತಿದ್ದವು.

*** ***

ನಾವೆಲ್ಲರೂ ಕೆಲಸಕ್ಕೆ ಹೊರಟು ಹೋದ ಮೇಲೆ ದಿನವಿಡೀ ರೂಮಿನಲ್ಲೇ ಕುಳಿತು ಬೇಜಾರಾಗುತ್ತಿದ್ದ ಅಮ್ಮ ಬೇಡಬೇಡವೆಂದರೂ ತನ್ನದೇ ವೇಳಾಪಟ್ಟಿ ಹಾಕಿಕೊಂಡು ನಮ್ಮೆಲ್ಲರ ಬಟ್ಟೆ ಒಗೆದಳು; ಬೆಡ್‌ಶೀಟು, ರಗ್ಗು, ಕಾಲೊರೆಸುಗಳನ್ನೆಲ್ಲ ಇನ್ನೊಂದೆರಡು ದಿನದಲ್ಲಿ ತೊಳೆದು ಹಾಕಿದಳು, ಎದುರು ಮನೆ, ಆಚೀಚೆ ಮನೆಗಳವರ ಪರಿಚಯ ಮಾಡಿಕೊಂಡಳು, ಹೆಮ್ಮೆಯ ಮಾತುಗಳಲ್ಲೇ ಅವರಿಗೆ ‘ತನ್ನ’ ಹುಡುಗರ ಪರಿಚಯ ಮಾಡಿಕೊಟ್ಟಳು. ಅದೆಲ್ಲ ಮುಗಿದ ನಂತರ ಗತ್ಯಂತರವಿಲ್ಲದೇ ಸ್ವಲ್ಪಸ್ವಲ್ಪವಾಗಿ ನನ್ನ ಕಂಪ್ಯೂಟರ್ ಆನ್ ಮಾಡುವುದು, ಮೌಸು ಚಲಾಯಿಸುವುದು ಕಂಪ್ಯೂಟರ್‌ನಲ್ಲಿದ್ದ ಟಿವಿ ಹಾಕಿಕೊಂಡು ಮಧ್ಯಾಹ್ನದ ಧಾರಾವಾಹಿಗಳನ್ನು ನೋಡುವುದು ಕಲಿತಳು; ನಮಗೆ ಸ್ವಲ್ಪ ಸಮಾಧಾನವಾಯಿತು.

ದಿನಾ ಸಂಜೆ ರೂಮಿಗೆ ಬರುತ್ತಲೂ ನಮ್ಮಮ್ಮ ನಮಗೆಲ್ಲ ಟೀ ಮಾಡಿಕೊಟ್ಟು, ಮಾತನಾಡುತ್ತ, ಸುತ್ತ ಮುತ್ತಲಿನ ಮನೆಗಳ ಪ್ರವರಗಳನ್ನೆಲ್ಲ ನಮಗೆ ವರದಿ ಒಪ್ಪಿಸುತ್ತಿದ್ದಳು; ಬೆಂಗಳೂರಿನ ಸಂವಹನ ಶಕ್ತಿಗೆ ಬೆರಗಾಗುತ್ತಿದ್ದಳು. ನಮ್ಮ ಬಡಾವಣೆಯಲ್ಲಿ ನಂದಿನಿ ಹಾಲಿನ ಏಜನ್ಸಿ ಹಿಡಿದಿರೋ ಹೆಂಗಸು ಮಂಡ್ಯದ ಕಡೆಯವರು, ಎದುರುಗಡೆ ಮನೆಯ ಒಂದೇ ಕೋಣೆಯಲ್ಲಿ ಬಾಡಿಗೆಗಿರುವ ಅಮ್ಮ ಮಗಳಿಬ್ಬರೂ ನಮ್ಮೂರಿನ ಹತ್ತಿರದವರೇ. ಆ ಹೆಂಗಸು ನಿರ್ವಾಣಸ್ವಾಮಿ ಮಠದಲ್ಲಿ ಅಡಿಗೆ ಮಾಡಿಕೊಂಡಿದ್ದಳಂತೆ. ಮಗಳು ಈಗ ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಾಳೆ−ಅದೇನೋ ಫೋನಿನಲ್ಲಿ ರಾತ್ರಿಯೆಲ್ಲ ಬರೀ ಮಾತನಾಡೋದೇ ಕೆಲಸವಂತೆ! ಎದುರಿನ ಮನೆಯ ಕೆಳ ಅಂತಸ್ತಿನ ಒಂದೂವರೆ ಕೊಠಡಿಗಳಲ್ಲಿ ವಾಸವಾಗಿರೋ ಐದು ಸಣ್ಣ ಸಣ್ಣ ಮಕ್ಕಳಿರೋ ಮುಸ್ಲಿಂ ಕುಟುಂಬ ಹಾಸನದ ಕಡೆಯದ್ದು−ದೊಡ್ಡ ಹುಡುಗ ಈ ಸರ್ತಿ ಏಳನೇ ಕ್ಲಾಸು ಫೇಲಾಗಿದ್ದಕ್ಕೆ ಅವನಪ್ಪ ತಳ್ಳೋ ಗಾಡಿ ಹಾಕಿಕೊಡ್ತೀನಿ ವ್ಯಾಪಾರ ಮಾಡು ಅಂದನಂತೆ. ಎದುರುಗಡೆ ಮನೆಯ ಮಾಲೀಕರ ಇಡೀ ಕುಟುಂಬ ಮದುರೈಯಿಂದ ವಲಸೆ ಬಂದದ್ದು, ಬೆಂಗಳೂರಿಗೆ ಬಂದಮೇಲೇ ಎಲ್ಲರೂ ಕ್ರಿಶ್ಚಿಯನ್‌ಗಳಾದರಂತೆ.

ನಮ್ಮಮ್ಮನ ಬೆರಗಿಗೆ ನಾವುಗಳು ಇನ್ನೂ ವಿವರಗಳನ್ನು ಸೇರಿಸುತ್ತಿದ್ದೆವು. ನಮ್ಮ ಆಫೀಸುಗಳಲ್ಲಿದ್ದ ಉತ್ತರ ಭಾರತದವರು, ಹಿಂದಿ ಮಾತನಾಡುವವರು, ತೆಲುಗರು, ತಮಿಳರು. ಒಬ್ಬ ಮ್ಯಾನೇಜರ್ ತಮಿಳನಾದರೆ, ಇಡೀ ತಂಡ ತಮಿಳುಮಯ, ಕೆಲಸಗಾರರೆ ಕೊಯಂಬತ್ತೂರು, ಚೆನ್ನೈನಿಂದ ಆಮದು, ಐದೈದು ವರ್ಷ ಬೆಂಗಳೂರಿನಲ್ಲಿದ್ದೂ, ಕಾರು, ಫ್ಲಾಟು ಅಂತ ಮಾಡಿಕೊಂಡೂ ‘ಬೆಂಗಳೂರು ನಿಜವಾದ ಮೆಟ್ರೋ ಸಿಟಿ. ಕನ್ನಡ ಯಾಕೆ ಕಲಿಯಬೇಕು, ನನಗಂತೂ ಕನ್ನಡ ಕಲಿಯಬೇಕು ಅಂತ ಅನಿಸಲೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ’ ಎನ್ನುವ ಬಿಹಾರಿಗಳು, ಕನ್ನಡಿಗರಿಗೇ ಯಾವುದೊಂದೂ ಸಹಾಯ ಮಾಡದ ನಮ್ಮವರು, ನಮ್ಮ ಆನ್‌ಲೈನ್ ಕನ್ನಡತನ, ಕನ್ನಡ ಕೂಟಗಳು, ಗುಂಪುಗಳು, ಅಲ್ಲಿ ಚರ್ಚಿತವಾಗುವ ಕನ್ನಡಿಗನೊಬ್ಬನ ಅಳಲು − ‘ನಾನು ಮೊನ್ನೆ ಕ್ಷೌರಿಕನ ಅಂಗಡಿಗೆ ಹೋಗಿದ್ದೆ, ಅವನು ಟೇಪ್‌ನಲ್ಲಿ ತೆಲುಗು ಹಾಡುಗಳನ್ನು ಹಾಕಿದ್ದ, ನಾನು ಕನ್ನಡ ಹಾಡುಗಳನ್ನು ಹಾಡಿಸಿ ಅಂತ ಕೇಳೋಣ ಅಂದುಕೊಂಡೆ, ಆದರೆ ಕೇಳಲಿಲ್ಲ(ಧೈರ್ಯ ಸಾಲಲಿಲ್ಲ!), ಸುಮ್ಮನೆ ಕೂದಲು ಕೊಟ್ಟು ಬಂದೆ, ಈಗ ಬಹಳ ದ್ವಂದ್ವದಲ್ಲಿದ್ದೇನೆ, ನಾನು ಕೇಳಬೇಕಾಗಿತ್ತೇ? ನಾನು ಮಾಡಿದ್ದು ತಪ್ಪೇ, ಸರಿಯೇ?’ ಇದಕ್ಕೆಲ್ಲ ಅಮ್ಮ ಕೂಡ ತನ್ನ ಸಮೀಕರಣವನ್ನು ಹೇಳುತ್ತಿದ್ದಳು. ನಮ್ಮೂರಿನಿಂದ, ಹಳ್ಳಿಯಿಂದ ಇಲ್ಲಿಯ ಬಟ್ಟೆಯಂಗಡಿಗಳಿಗೆ, ಬಟ್ಟೆ ಫ್ಯಾಕ್ಟರಿಗಳಿಗೆ, ಐಟಿಐ ಮುಗಿಸಿ ಬೇರೆ ಕಾರ್ಖಾನೆಗಳಿಗೆ ಬಂದ ಗಂಡುಮಕ್ಕಳು, ಹೆಣ್ಣುಮಕ್ಕಳ ಬಗ್ಗೆ ಹೇಳುತ್ತಿದ್ದಳು. ಬಂದವರು, ಊರಿನಲ್ಲಿ ಅವರ ಅಪ್ಪ−ಅಮ್ಮನ ಮೇಲಿದ್ದ ಸಾಲ ತೀರಿಸಿದ್ದು, ತಂಗಿಯ ಮದುವೆ ಮಾಡಿಸಿದ್ದು, ಚಿನ್ನ−ಒಡವೆ ಅಂತೆಲ್ಲ ಮಾಡಿಸಿಕೊಂಡಿದ್ದು, ಇನ್ನೂ ಕೆಲವರು ಒಂದು ಕೆಲಸಕ್ಕೂ ಅಂಟಿಕೊಳ್ಳದೇ ಬೆಂಗಳೂರಿನ ಥಳಕು−ಬಳುಕಿಗೆ ಮಾರುಹೋಗಿ, ಮನೆಯಿಂದಲೇ ದುಡ್ಡು ತರಿಸಿಕೊಂಡು ಮಜಾ ಮಾಡಿ ಹಾಳಾದದ್ದನ್ನೂ ಉದಾಹರಣೆ ಸಮೇತ ಹೇಳುತ್ತಿದ್ದಳು. ಎಲ್ಲಕ್ಕೂ ಕೊನೆಗೆ ಆ ಆಟೋ ಡ್ರೈವರ್‌ನ ನಿರ್ಧಾರವನ್ನು ಹಳಿಯುತ್ತಿದ್ದಳು, “ಏನಾದ್ರೂ ಆಗ್ಲಿ, ಮನಸ್ಸು−ಮೈ ಸರಿ ಇಟ್ಟುಕೊಂಡು ಇಲ್ಲೇ ದುಡಿಮೆ−ದುಡ್ಡು−ದುಕ್ಕಾಣಿ ಅಂತ ನೋಡೋದು ಬಿಟ್ಟು ವಾಪಸ್ಸು ಹೋಗೋದು ಅಂದ್ರೇ? ಸ್ವಲ್ಪನಾದ್ರೂ ನಾಚಿಕೆ ಆಗಬಾರದೇ ಅವನಿಗೆ? ತಲೆ ಇದ್ರೆ, ಇಲ್ಲೇ ಮನಸ್ಸಿಗೆ ಹೊಂದೋವಂತ ನೂರಾರು ಕೆಲಸಗಳು, ಕೇಮೆಗಳು ಸಿಗುತ್ವೆ. ಅದು ಬಿಟ್ಟು...?”

ಎರಡು ವಾರವಾಗುತ್ತಲೂ ನನ್ನೊಬ್ಬ ಸ್ನೇಹಿತನ ತಮ್ಮ ಹರೀಶ, ಇಂಜಿನಿಯರಿಂಗ್‌ನ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಒಂದು ತಿಂಗಳ ರಜೆಯಲ್ಲಿ ಬೆಂಗಳೂರಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಮಾಡಿಕೊಳ್ಳಲು ಬಂದ. ಇನ್ನು ಒಂದು ವರ್ಷ, ಅವನೂ ಇಂಜಿನಿಯರಿಂಗ್ ಮುಗಿಸಿ, ಭಾಲ್ಕಿಯಿಂದ ನಮ್ಮ ರೂಮಿಗೆ ಬಂದಿಳಿಯುತ್ತಾನೆ, ಮೂವರಿರುವ ರೂಮಿಗೆ ನಾಲ್ಕನೆಯವನ ಸೇರ್ಪಡೆ, ಅವನ ಉದ್ಯೋಗ ಹುಡುಕುವಿಕೆ, ಹೊಂದಾಣಿಕೆಗಳು ಹೊಸದಾಗಿ ಶುರುವಾಗುತ್ತವೆ. ಈಗ ಹರೀಶ ಬಂದದ್ದು ನನ್ನಮ್ಮನಿಗೆ ಸಮಯ ಕಳೆಯಲು ಸಹಾಯಕವಾಯಿತು. ನಮ್ಮೆಲ್ಲರಿಗಿಂತ ಸಣ್ಣವನಿದ್ದ ಅವನು ನನ್ನಮ್ಮನ ಎಲ್ಲ ಕೆಲಸಗಳನ್ನು ಮಾಡಿಕೊಡುವ, ಎಲ್ಲ ಮಾತುಗಳನ್ನು ಕೇಳುವ ಚಿನಕುರಳಿಯಾದ. ಅವರಿಬ್ಬರೂ ಸಂಜೆಯ ಇಳಿಬಿಸಿಲಿನಲ್ಲಿ ವಾಕಿಂಗ್ ಹೋಗುವುದು, ಮನೆಗೆ ಬೇಕಾದ ಸಾಮಾನು ತರುವುದು, ಅಡಿಗೆ ಮಾಡುವುದು ಮಾಡಲಾರಂಭಿಸಿದರು. ದಿನಾ ಸಂಜೆ ಆಫೀಸಿನಿಂದ ಬಂದರೆ ನನ್ನಮ್ಮ ಅವರಿಬ್ಬರೂ ಮಾಡಿದ ಕೆಲಸಗಳ ಬಗ್ಗೆ, ತಿಂದ ತಿಂಡಿಗಳ ಬಗ್ಗೆ, ಹೋಗಿಬಂದ ಬಡಾವಣೆ−ದೇವಸ್ಥಾನಗಳ ಬಗ್ಗೆ ನಮಗೆ ಹೇಳುತ್ತಿದ್ದಳು, ಹರೀಶನನ್ನು ತಮಾಷೆ ಮಾಡುತ್ತಿದ್ದಳು.

*** ***

ಒಂದು ಭಾನುವಾರ ಬೆಳಿಗ್ಗೆ ನಮ್ಮದೆಲ್ಲ ತಿಂಡಿಯಾದ ಮೇಲೆ ಎಲ್ಲರಿಗೂ ಬಲವಂತವಾಗಿ ನೆತ್ತಿಗೆ ಎಣ್ಣೆ ಮೆತ್ತಿ, ಟೆರೇಸಿಗೆ ಕಳಿಸಿ, “ಅರ್ಧ ಗಂಟೆ ಬಿಸಿಲಲ್ಲಿರಿ, ಆಮೇಲೆ ಬಿಸಿಬಿಸಿ ನೀರು ಕಾಯಿಸಿಕೊಡ್ತೇನೆ, ಎಲ್ಲರೂ ಸ್ನಾನ ಮಾಡಿ ಹೊರಗಡೆ ಊಟಕ್ಕೆ ಹೋಗೋಣ” ಅಂದಳು. ಆ ನಂತರ ರೂಮಿನ ಅಳಿದುಳಿದಿದ್ದ ಶುಚಿತ್ವದ ಕಾರ್ಯ ಕೈಗೆತ್ತಿಕೊಂಡಳು, ನಾವೆಲ್ಲ ಆ ಕಿರಿದಾದ ಟೇರೇಸಿಗೆ ಬಾಲು, ಪುಸ್ತಕಗಳೊಂದಿಗೆ ಹೋಗಿ ಕುಳಿತು, ಆಟ−ನಗು−ಮಾತು−ಗೇಲಿ ನಡೆಸಿದೆವು. ಆಚೀಚೆ ಮನೆಗಳ ಟೇರೇಸಿನ ಮೇಲಿನ ಜೀವನವನ್ನು ಗಮನಿಸಲಾರಂಭಿಸಿದೆವು, ಟೆರೇಸುಗಳ ಮೇಲಿದ್ದ, ಕೆಳಗಿನ ಬೀದಿಯಲ್ಲಿ ಓಡಾಡುತ್ತಿದ್ದ ಹುಡುಗಿಯರ ಬಗ್ಗೆ ಮಾತನಾಡಿಕೊಳ್ಳಲಾರಂಭಿಸಿದೆವು.

ಕಾಲು ಗಂಟೆಯಾಗಿರಲಿಲ್ಲ, ಅಮ್ಮ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ಟೆರೇಸ್ ಮೇಲಕ್ಕೆ ಬಂದಳು, ಆ ಪ್ಲಾಸ್ಟಿಕ್ ತುಂಬ ಹತ್ತಿ. “ಇಲ್ನೋಡ್ರೋ?” ಆ ಹತ್ತಿ ನಾವೇ ಕೊಂಡು ತಂದಿದ್ದು. ನನ್ನ ಸ್ನೇಹಿತ ಚೇತನ್‌ನ ಉಳಿಕೆಯ ಪ್ಲಾನುಗಳಲ್ಲಿ, ಇರಲಿ ಎಂದು ಕೊಂಡು ತಂದಿದ್ದ ಆ ಹತ್ತಿಯೂ ಸೇರಿತ್ತು. ಅಮ್ಮ ಮೆಲ್ಲನೆ ನಮ್ಮೆದುರು, ಪ್ಲಾಸ್ಟಿಕ್‌ನೊಳಗೇ ಹತ್ತಿಯ ಪದರ ಬಿಡಿಸಿ ತೋರಿಸಿದಳು. ಅಲ್ಲಿ ಹತ್ತಿಯೊಳಗೆ ಬೆಚ್ಚಗೆ ಕಿರುಬೆರಳಿಗೂ ಸಣ್ಣ ಗಾತ್ರದ, ಗುಲಾಬಿ ಬಣ್ಣದ ಎಂಟ್ಹತ್ತು ಇಲಿಮರಿಗಳು ಮುಲುಗುಡುತ್ತಿದ್ದವು. ಇನ್ನೂ ಕಣ್ಣೂ ಬಿಡಲಾರದೇ, ಕೈಕಾಲು ಮುದುರಿಕೊಂಡು, ಮೂತಿಗಳನ್ನು ಮೆಲ್ಲನೆ ಅತ್ತಿತ್ತ ಮೂಸುವಂತೆ ತಿರುಗಿಸುತ್ತಿದ್ದವು. “ನಿಮ್ಮನ್ನು ನೀವು ಸಾಕಿಕೊಳ್ಳದೇ ಇವುನ್ನೂ ಸಾಕ್ತಾ ಇದೀರೇನ್ರೋ?” ಅಮ್ಮ ನಕ್ಕಳು.

ಚೇತನ್ ನುಡಿದ, “ಇತ್ತೀಚೆಗೆ ರೂಮಿನಲ್ಲಿ ಇಲಿಗಳ ಕಾಟ ಜಾಸ್ತಿಯಾಗಿತ್ತು. ನೋಡಿದ್ರೆ ಫ್ಯಾಮಿಲಿ ಸ್ಟಾರ್ಟ್ ಮಾಡ್ತಿವೆ?”
“ಈ ಹತ್ತಿ ಯಾವಾಗ ತಂದಿದ್ದು?”
“ಒಂದ್ವರ್ಷದ ಮೇಲೇ ಆಯ್ತು”
“ಓ ಹೌದಾ? ಯಾಕಿಷ್ಟು ಹತ್ತಿ?” ಅಮ್ಮನ ಪ್ರಶ್ನೆಗೆ ನಾವೆಲ್ಲ ನಕ್ಕೆವು. ಚೇತನ್ ವಿವರಣೆಕೊಟ್ಟ, “šಮ್ನೆ ಆಂಟಿ, ಇರಲೀಂತ. ದಿನಾ ಸ್ನಾನ ಮಾಡಿದ ಮೇಲೆ ಕಿವಿ ಕ್ಲೀನ್ ಮಾಡ್ಕೊಳ್ಳೋಕೆ, ದೇವರ ದೀಪಕ್ಕೆ...”
“ಆದ್ರೂ ಇಷ್ಟು ಹತ್ತಿ! ಇದು ನಿಮಗೆ ಇನ್ನೂ ಹತ್ತು ವರ್ಷವಾದರೂ ಬಾಳುತ್ತೆ” ನಾವೆಲ್ಲ ಇನ್ನೂ ಜೋರಾಗಿ ನಕ್ಕೆವು. ಚೇತನ್ ಗದರಿದ, “ಸುಮ್ನೇ ಇರ್ರೋ!”
“ಈಗೇನು ಮಾಡೋದಪ್ಪ ಇದನ್ನ?” ಚೇತನ್ ಅಮ್ಮನಿಂದ ಹತ್ತಿಯ ಕವರ್ ತೆಗೆದುಕೊಂಡು ಕೂಲಂಕುಶವಾದ ಪರೀಕ್ಷೆ ಮಾಡಿದ. ಮೇಲೆ ಚೆನ್ನಾಗಿದ್ದ ಹತ್ತಿಯನ್ನೆಲ್ಲ ಬಿಡಿಸಿ, “ಇದನ್ನು ಉಪಯೋಗಿಸಬಹುದು, ಇಟ್ಕೊಳ್ಳಿ!” ಎಂದು, “ಸಾಯಿಸ್ಬಿಡೋಣ್ವಾ?” ಅಂತ ನಮ್ಮೆಲ್ಲರ ಅಭಿಪ್ರಾಯ ಕೇಳಿದ,
ನಾನು ಹೇಳಿದೆ, “ಬೇಡಾ, ಯಾಕೆ...” ನನ್ನ ಮಾತು ತುಂಡರಿಸಿ ಇನ್ನೊಬ್ಬ ಸ್ನೇಹಿತ ಶಿವು ನುಡಿದ, “ಬೇಡ, ನೀನು ಏನು ಹೇಳ್ತೀಯಾಂತ ನಮಗೆ ಗೊತ್ತು. ಚೇತನ್, ಅವುಗಳನ್ನ ಸಾಯ್ಸೋಣ ಕಣೋ!”
“ಸರೀ, ಹೇಗೆ?”
“ನೆಲಕಪ್ಪಳಿಸಿದರೆ ಒಂದೇ ಹೊಡೆತಕ್ಕೆ ಫಿನಿಶ್!”
"ಹತ್ತಿ ಇಲ್ವಾ? ಅವುಗಳಿಗೆ ಏನೂ ಆಗಲ್ಲ”
“ಹಾಗಾದ್ರೆ ಕವರ್‌ನೊಳಕ್ಕೆ ನೀರು ತುಂಬೋದು!”
ನಾನು ಹೇಳಿದೆ, “ಛೇ, ಬೇಡಾ ಕಣ್ರೋ!”
“ಹೌದಾ? ಹಾಗಾದ್ರೆ ಏನ್ ಮಾಡೋಣಾಂತ ತಮ್ಮ ಪ್ಲಾನು?” ಶಿವು ಕೇಳಿದ.
“ತಗೊಂಡುಹೋಗಿ ಬೀದಿಕೊನೇಲಿರೋ ಕಸದ ತೊಟ್ಟಿಯಲ್ಲಿ ಹಾಕಿಬಿಡೋಣ. ಅವುಗಳಿಗೆ ಬದುಕೋಕೆ ಶಕ್ತಿ ಇದ್ದರೆ ಬದುಕಿಕೊಳ್ಳಲಿ...” ಅವರೆಲ್ಲ ಗಹಗಹಿಸಿ ನಕ್ಕರು. “...ಇಷ್ಟು ದೊಡ್ಡ ಊರಿನಲ್ಲಿ ಎಲ್ಲರಿಗೂ ಬದುಕೋಕೆ ದಾರಿಗಳಿವೆ, ಹಕ್ಕಿದೆ, ಈ ಇಲಿಮರಿಗಳಿಗೂ ಕೂಡ! ಕಾಗೆಗಳೋ, ಬೆಕ್ಕೋ ಇವುಗಳನ್ನ ಮುಗಿಸಿದ್ರೆ ಮುಗಿಸಲಿ, ಸತ್ತರೆ ಸಾಯಲಿ, ಇಲ್ಲದಿದ್ರೆ ಬದುಕಿಕೊಳ್ಳಲಿ ಬಿಡಿ” ಅಮ್ಮ ತನ್ನ ಅಂತಿಮ ನಿರ್ಣಯ ಕೊಟ್ಟಳು. “ಇರ್ಲೀ ಬಿಡಿ, ಇವುಗಳನ್ನ ಕಸದ ತೊಟ್ಟಿಗೇ ಹಾಕಿಬರೋಣ. ಆದ್ರೆ ರೂಮಿನಲ್ಲಿ ಧಾಂದಲೆ ಮಾಡ್ತಿರೋ ಇವುಗಳಪ್ಪ−ಅಮ್ಮ ಇಲಿಗಳಿಗೆ ಮಾತ್ರ ಪಾಶಾಣ ಇಡೋಣ, ಸರೀನಾ?” ನನ್ನ ಸ್ನೇಹಿತರಿಬ್ಬರೂ ಸೋತವರಂತೆ ನಿಟ್ಟುಸಿರು ಬಿಟ್ಟರು, ನಾನು ನಸುನಕ್ಕು ಸರಿಯೆಂಬಂತೆ ತಲೆಯಾಡಿಸಿದೆ.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.7 (3 ಓಟುಗಳು)
ನಿವೇದಿತಾ's picture
ಸೋಮ, 06/07/2009 - 14:22 ರಂದು ನಿವೇದಿತಾ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ನಿಮ್ಮ ಲೇಖನ,ಕಥೆ. ಅದೆಷ್ಟೇ

ನಿಮ್ಮ ಲೇಖನ,ಕಥೆ. ಅದೆಷ್ಟೇ ಉದ್ದವಿದ್ರೂ ಓದ್ತಾ ಇರ ಬೇಕು ಅನ್ನಿಸುತ್ತೆ.. ಕಥೆ ಚನ್ನಾಗಿತ್ತು.

ರಾಜೇಶ ಹೆಗಡೆ's picture
ಸೋಮ, 11/05/2009 - 18:10 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಹಾಯ್ ಶಿವಕುಮಾರ್, ನಿಮ್ಮ ಲೇಖನ

ಹಾಯ್ ಶಿವಕುಮಾರ್,

ನಿಮ್ಮ ಲೇಖನ ಓದುತ್ತಾ ಬೆಂಗಳೂರಿಗೆ ಬರುವ ನನ್ನ ಅಮ್ಮನ ನೆನಪಾಯ್ತು. ನನ್ನ ಅಮ್ಮನ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. Smile

ಲೇಖನ ಓದುವಾಗ ಇಲಿಯ ಮರಿಗಳು ಸಾಯದಿರಲಿ ಎಂದು ನನ್ನ ಮನಸ್ಸು ಪ್ರಾರ್ಥಿಸುತಿತ್ತು. ಕೊನೆಗೆ ಹಾಗೇ ಆದುದಕ್ಕಾಗಿ ಖುಷಿ ಆಯ್ತು. Smile

ಭವ್ಯ ಕೆ ಆರ್'s picture
ಗುರು, 01/10/2009 - 17:05 ರಂದು ಭವ್ಯ ಕೆ ಆರ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಶಿವಕುಮಾರ್ ರವರೆ ನಿಮ್ಮ ಲೆಖನ ಒದಿ

ಶಿವಕುಮಾರ್ ರವರೆ ನಿಮ್ಮ ಲೆಖನ ಒದಿ ತು0ಬ
ಖುಶಿ ಆಯಿತು. ನಾನು ನಿಮ್ಮ ಅಭಿಮಾನಿ ಅಗಿದ್ದೆನೆ. ನಿಮ್ಮ
ಲೆಖನ ನಾನು ಬೆ0ಗಳುರಿಗೆ ಬ0ದ ದಿನವನ್ನು ನೆನಪಿಸಿತು
ತು0ಬ ದನ್ಯವಾದಗಳು

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
7 + 0 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content