ಕೀಲಿ ಕೈ

ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 22 April 2009

ಳಿಗಾಲದ ಸಂಜೆ ಮೆತ್ತಗೆ ರಾತ್ರಿಯಾಗುತ್ತಿತ್ತು. ಶನಿವಾರವಾದುದರಿಂದ ರಸ್ತೆಗಳಲ್ಲಿ ವಾಹನದಟ್ಟಣಿ ಜಾಸ್ತಿಯಿತ್ತು. ವಾರವೆಲ್ಲ ಮೈಮುರಿದು ದುಡಿದ ಜನ, ಬರುವ ಭಾನುವಾರದ ವಿರಾಮಕ್ಕೆ ಹಾತೊರೆಯುತ್ತಿದ್ದುದು ಕಾಣಿಸುತ್ತಿತ್ತು. ನಾನೂ ನನ್ನ ಸ್ನೇಹಿತನೂ ವಾಕಿಂಗ್ ಹೊರಟಿದ್ದೆವು. ಮನುಷ್ಯನ ವ್ಯಕ್ತಿತ್ವ-ವರ್ತನೆಗಳ ಬಗ್ಗೆ ನಮ್ಮದೇ ಸಿದ್ಧಾಂತಗಳಾಧಾರಿತ ಮಾತು-ಹರಟೆ ನಡೆಯುತ್ತಿತ್ತು.

“ಎಲ್ಲರೂ ಹಾಗೇನೇ. ನಾನೂ, ನೀನೂ, ಎಲ್ಲರೂ. ನಮ್ಮ ನಿಜವಾದ, ಅಷ್ಟಾಗಿ ಬದಲಾಗದ ವ್ಯಕ್ತಿತ್ವ ಒಂದಿರುತ್ತೆ ನಿಜ, ಆದರೆ ಅದಕ್ಕೆ ಬದ್ಧವಾಗಿ ಯಾವಾಗಲೂ ನಮ್ಮ ವರ್ತನೆ ಇರೋದಿಲ್ಲ. ನಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ತಕ್ಕ ಹಾಗೆ ನಮ್ಮ ವರ್ತನೆ ಬದಲಾಗುತ್ತೆ. ಅದು ಮಾನವನ ಅಡಾಪ್ಟಬಿಲಿಟಿ. ತುಂಬಾ ಕ್ರೂರವಾದ ವಾತಾವರಣದಲ್ಲಿ ಎಂಥಾ ಮೆತ್ತಗಿನ ಮನುಷ್ಯ ಕೂಡಾ ದೃಢವಾಗ್ತಾನೆ, ಸಿಡಿದೇಳ್ತಾನೆ. ಎಂಥಾ ಕ್ರೂರಿಯಾದರೂ ತೀರಾ ಸೌಮ್ಯವಾದ ಜನರ ಮಧ್ಯೆ ಸೌಮ್ಯವಾಗಿ ಬಿಡ್ತಾನೆ.”

ಶನಿವಾರದ ಸಂಜೆಗೆಂದು ವಿಸಿಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಹೊರಟಿದ್ದೆವು. ಇಂಗ್ಲೀಷ್ ಚಿತ್ರ ‘ಫೇಸ್ ಆಫ್’. ಈ ಚಿತ್ರದಲ್ಲಿ ನಾಯಕ ಕಾರಣಾಂತರಗಳಿಂದ ಖಳನಾಯಕನ ಚಹರೆ ಹೊತ್ತು ಜೈಲು ಸೇರುತ್ತಾನೆ. ಖಳನಾಯಕ ನಾಯಕನ ಚಹರೆ ಹೊತ್ತು ಧಾಂದಲೆ ನಡೆಸುತ್ತಾನೆ. ನಾನು ತುಂಬಾ ಹಿಂದೆಯೇ ಇದನ್ನು ನೋಡಿದ್ದೆ, ಅವನೂ ಯಾವಾಗಲೋ ಕಾಲೇಜಿನಲ್ಲಿರುವಾಗ ಅರ್ಧ ನೋಡಿದ್ದನಂತೆ. ಹೊಸ ಚಿತ್ರಗಳ್ಯಾವೂ ಇಷ್ಟವಾಗದ ಕಾರಣ ಇದೊಂದೊಳ್ಳೆ ಚಿತ್ರವನ್ನೇ ನೋಡೋಣ ಅಂದುಕೊಂಡು ಹೊರಟಿದ್ದೆವು, ಚಳಿ ಹೆಚ್ಚಾಗುತ್ತಿತ್ತು.

"ಹೊಂದಾಣಿಕೆ ಅನ್ನೋದು ನೀನು ನೀನು ಹೇಳಿದ್ದಕ್ಕಿಂತ ವಿರುದ್ಧವಾಗಿಯೂ ಆಗಬಹುದಲ್ಲ, ಕ್ರೂರಿ ಮನುಷ್ಯ ಸೌಮ್ಯ ಜನರ ನಡುವೆ ಬಾಳುತ್ತ ಅವರ ಮೇಲೆ ದಬ್ಬಾಳಿಕೆ ಮಾಡಬಹುದಲ್ಲ? ತುಂಬಾನೇ ಹೋಸ್ಟೈಲ್ ಆದ ವಾತಾವರಣದಲ್ಲಿ ಮೊದಲೇ ಮೆತ್ತಗಿರುವ ಮನುಷ್ಯ ಇನ್ನೂ ಮೆತ್ತಗಾಗಿ ಸೋತುಬಿಡಬಹುದಲ್ಲ?”

"ಹೌದು, ನಾವೆಷ್ಟೇ ಹೊಂದಾಣಿಕೆಗಳನ್ನು ಮಾಡಿಕೊಂಡರೂ, ಮುಖವಾಡಗಳನ್ನು ಧರಿಸಿಕೊಂಡರೂ ಅವೆಲ್ಲ ನಮ್ಮ ಮೂಲ ವ್ಯಕ್ತಿತ್ವದ ಮೇಲೇ ಅವಲಂಬಿತವಾಗಿರುತ್ತವೆ. ನಮ್ಮ ವ್ಯಕ್ತಿತ್ವದ ಪ್ರಕಾರವೇ ನಾವು ಸಮಾಜದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ನಮ್ಮ ಸಮಾಜದೆಡೆಗಿನ ಅಡಾಪ್ಟಬಿಲಿಟಿಯ ಕೀಲಿಕೈ ನಮ್ಮ ವ್ಯಕ್ತಿತ್ವವೇ ಹೌದು!”

ಅದುವರೆಗೂ ಇಲ್ಲದಿದ್ದ ಕರೆಂಟ್ ಬಂದು ಬೀದಿ ದೀಪಗಳೂ, ರಸ್ತೆಯ ಆಚೀಚೆ ಇದ್ದ ಅಂಗಡಿಗಳೊಳಗಿನ ದೀಪಗಳೂ ಫಕ್ಕನೆ ಹೊತ್ತಿಕೊಂಡವು. ನಮ್ಮ ಮುಂದೆ ನಡುರಸ್ತೆಯ ವಾಹನ ಸಂದಣಿಯಲ್ಲಿ ಮಗುವನ್ನೆತ್ತಿಕೊಂಡ ಹೆಂಗಸೊಬ್ಬಳು ಇದ್ದಕಿದ್ದಂತೇ ಕುಸಿದು ಬಿದ್ದಳು. ನನ್ನ ಕಾಲುಗಳು ನಡುಗಲಾರಂಭಿಸಿದವು. “ಶಿವೂ” ಅಂದೆ. ಇವನು ಸೀದಾ ಅವಳ ಹತ್ತಿರಕ್ಕೆ ಓಡಿದ. ಮಗು ಅಳುತ್ತಿತ್ತು. ಆಕೆ ದೇಹವನ್ನು ವಕ್ರವಕ್ರವಾಗಿ ಅಲುಗಿಸುತ್ತ ಬಿದ್ದಿದ್ದಳು, ಫಿಟ್ಸ್ ಇರಬೇಕು. ನಾನಿನ್ನೂ ಗಾಬರಿಯಲ್ಲೇ ಇರುವಾಗಲೇ ಇವನು ವಾಪಸ್ಸು ಓಡಿ, ಅಲ್ಲೇ ರಸ್ತೆಬದಿಯ ಬೇಕರಿಯೊಂದರ ಕೌಂಟರ್ ಮೇಲಿನಿಂದ ನೀರಿನ ಜಗ್ ಒಂದನ್ನು ತಂದೇ ಬಿಟ್ಟ. ಅವನು ನೀರನ್ನು ಕೈಗೆ ತೆಗೆದುಕೊಂಡು ಆಕೆಯ ಮುಖಕ್ಕೆ ಚಿಮುಕಿಸುತ್ತಿದ್ದಂತೆಯೇ ಸರಕ್ಕನೇ ನಮಗೆ ತಾಗಿದಂತೆಯೇ ಒಂದು ವ್ಯಾನ್ ಬ್ರೇಕ್ ಹಾಕಿ ನಿಂತಿತು.

ಡ್ರೈವರ್ ಸೀಟಿನಲ್ಲಿದ್ದವನು “ಏನ್ ಜನಾರೀ?! ಅದು ಫಿಟ್ಸ್ ಕಣ್ರೀ. ನೀರು ಹಾಕಬೇಡಿ, ಏನಾದ್ರೂ ಲೋಹದ ವಸ್ತು ಕೈಗೆ ಕೊಡ್ರೀ” ಅಂತಾ ರೇಗಿದ. ಪ್ರತಿಯಾಗಿ ಇವನೂ ರೇಗಿದ, “ನಮಗೇನ್ರೀ ಗೊತ್ತು, ಅದು ಫಿಟ್ಸ್ ಅಂತಾ?”,

“ಗೊತ್ತಿಲ್ಲದಿದ್ರೆ ನೀರು ಯಾಕ್ರೀ ಹಾಕಿದ್ರೀ?”

"ಹೀಗೆ ನಡುರಸ್ತೆಯಲ್ಲಿ ಬಿದ್ರೆ ಗಾಬರಿಯಲ್ಲಿ ಇನ್ನೇನು ಮಾಡ್ತಾರೆ? ನೀವೇನು ಮಾಡ್ತಿದ್ರಿ?” ಅವನು ಗೊಣಗಿಕೊಂಡೇ ಗಾಡಿ ಚಲಾಯಿಸಿದ. ನಾನು ಕೈಲಿದ್ದ ರೂಮಿನ ಕೀಗೊಂಚಲನ್ನು ಮೌನವಾಗಿ ಇವನ ಕೈಗಿಟ್ಟೆ. ಇವನು ಅದನ್ನು ಮೆಲ್ಲಗೆ ಆಕೆಯ ಕೈಗಿಟ್ಟು ಬೆರಳುಗಳನ್ನು ಅದುಮಿದ.

ಅದುವರೆಗೂ ಸುಮ್ಮನೇ ನೋಡುತ್ತಿದ್ದ ಆಚೀಚೆಯ ಜನ ಬಂದರು. ಮೆಲ್ಲನೇ ಆಕೆಯನ್ನು ಎತ್ತಿಕೂರಿಸಿ ಗಾಳಿ ಹಾಕಿದರು. ಮಗುವಿಗೂ, ಆಕೆಗೂ ಏನೂ ಪೆಟ್ಟಾಗಿರಲಿಲ್ಲ. ಇವನು ನೀರಿನ ಜಗ್ ವಾಪಸ್ಸು ಬೇಕರಿಗೆ ತಲುಪಿಸಲು ಹೋದ. ನಾನೂ ನಡುಗುತ್ತಿದ್ದ ಹೆಜ್ಜೆಗಳೊಂದಿಗೆ ಅವನನ್ನು ಹಿಂಬಾಲಿಸಿದೆ. ನಾವು ಬೇಕರಿಯಿಂದ ವಾಪಸ್ಸು ಹಿಂತಿರುಗಿನೊಡುವಷ್ಟರಲ್ಲಿ ಆಕೆ ಮೆಲ್ಲನೆ ಮೇಲಕ್ಕೆದ್ದು ಮಗುವನ್ನು ಎತ್ತಿಕೊಳ್ಳುತ್ತಿದ್ದಳು.

ಇವನು ಬೈದುಕೊಳ್ಳುತ್ತಿದ್ದ, “ಕರ್ಮದ ಜನ ಮಾರಾಯ, ಬಿದ್ದಾಗ ಯಾರೂ ಓಡಿ ಬರಲಿಲ್ಲ. ನನಗೇನು ಗೊತ್ತು-ಫಿಟ್ಸ್ ಅದು, ನೀರು ಹಾಕಬಾರದು ಅಂತಾ? ಅವನೊಬ್ಬ ಕಾರಿನವನು ದೊಡ್ಡ ತೋಲಾಂಡಿ, ಕಾರ್ ಬಿಟ್ಟಿಳೀದೇ ನಮ್ಮೇಲೇ ಎಗರಾಡ್ತಿದಾನೆ...” ನನಗೆ ಆ ಸನ್ನಿವೇಶದಲ್ಲೂ ನಗುಬಂತು. “ಬಾ, ಹೋಗೋಣ..” ಅಂದುಕೊಂಡು ಮುಂದೆ ನಡೆದೆವು. ಆ ಹೆಂಗಸು-ಭಿಕ್ಷೆಯವಳಿರಬೇಕು, ಹರಿದು ಮಾಸಲಾದ ಬಟ್ಟೆಗಳು, ಜೋಳಿಗೆಯ ಮಗುವಿನೊಂದಿಗೆ ಎದ್ದು ರಸ್ತೆಯ ಬದಿಗೆ ಬಂದು ಅಲ್ಲೇ ಇದ್ದ ಬಸ್‌ಸ್ಟಾಪಿನ ತುಂಡುಗೋಡೆಗೆ ಬೆನ್ನು ತಾಗಿಸಿಕೊಂಡು ಸುಧಾರಿಸಿಕೊಳ್ಳಲೆಂಬಂತೆ ಕುಳಿತುಕೊಂಡಳು.

ಸಾಮಾನ್ಯವಾಗಿ ನಮ್ಮ ಸಂಜೆಯ ವಾಯುವಿಹಾರ ನಮ್ಮ ರೂಮಿನಿಂದ ಶುರುವಾಗಿ ನಮ್ಮ ದೊಡ್ಡ ಬಡಾವಣೆಯ ಮುಖ್ಯರಸ್ತೆಗಳನ್ನೆಲ್ಲ ಹಾದು, ಕೊನೆಯಲ್ಲಿದ್ದ ಇಂಜಿನಿಯರಿಂಗ್ ಕಾಲೇಜಿನ ಹತ್ತಿರದ ವಿಸಿಡಿ ಲೈಬ್ರರಿ ತಲುಪಿ, ಮತ್ತೆ ವಾಪಸ್ಸು ಬೇರೆ ಬೇರೆ ಗಲ್ಲಿಗಳ ಮೂಲಕ ಹಾದು ನಮ್ಮ ರೂಮಿಗೆ ಕೊನೆಯಾಗುತ್ತಿತ್ತು. ನಾವಿಬ್ಬರೂ ಹೀಗೇ ಮಾತನಾಡಿಕೊಂಡು ರಾತ್ರಿ ಎಂಟರ ವೇಳೆಗೆ ನಮ್ಮ ರೂಮಿನ ಬಾಗಿಲು ತಲುಪಿಕೊಂಡೆವು. ಇವನು ನನ್ನೆಡೆಗೆ ಕೀಗೋಸ್ಕರ ಕೈ ಚಾಚಿದ.
ನಾನು, “ನಿನಗೇ ಕೊಟ್ನಲ್ಲೋ” ಅಂದೆ, “ಎಲ್ಲಿ?”

“ಅಯ್ಯೋ, ರಸ್ತೆಯಲ್ಲಿ ಬಿದ್ದ ಹೆಂಗಸಿನ ಕೈಗೆ ಕೀ ಕೊಟ್ಯಲ್ಲ, ವಾಪಸ್ಸು ಇಸ್ಕೊಳ್ಲಿಲ್ವೇನೋ?”
“ಛೇ! ಇಲ್ಲ ಮಾರಾಯ. ಈಗ ಎಲ್ಲಿ ಹೋಗೋದು, ಎಲ್ಲಿ ಹುಡುಕೋದು?”

“ನಡೀ ವಾಪಸ್ಸು ಆ ಬಸ್‌ಸ್ಟಾಪಿನ ಹತ್ರ ಹೋಗಿ ಬರೋಣ” ಇಬ್ಬರೂ ಓಡೋಡುತ್ತ ಬಸ್‌ಸ್ಟಾಪಿನ ಬಳಿ ಬಂದೆವು. ಅಲ್ಲೆಲ್ಲೂ ಆ ಹೆಂಗಸು ಕಾಣಿಸಲಿಲ್ಲ.
“ರೂಮಿಗೆ ಇರೋದು ಒಂದೇ ಕೀ. ರೂಂ ಕೀ ಜೊತೆಗೆ ಕಬೋರ್ಡ್ ಕೀನೂ ಇತ್ತಲ್ಲೋ? ಬೀಗ ಒಡೆಯೋದು ಗೊತ್ತಾದ್ರೆ ಓನರ್ ತಾತ ಕಿರಿಕಿರಿ ಮಾಡ್ತಾರೆ.” “ಏನ್ಮಾಡೋದು ಈಗ? ಎಲ್ಲಿ ಆ ಹೆಂಗಸನ್ನು ಹುಡ್ಕೋದು?”

ಏನೂ ತೋಚದೇ ಹಾಗೇ ಸ್ವಲ್ಪ ಹೊತ್ತು ನಿಂತೆವು. ಏನನ್ನೋ ನೆನಪಿಸಿಕೊಂಡವನಂತೆ ಶಿವು ಹೇಳಿದ, “ನಾನು ದಿನಾ ಬೆಳಿಗ್ಗೆ ಕ್ರಿಕೆಟ್ ಆಡ್ಲಿಕ್ಕೆ ಸ್ಕೂಲ್‌ಗ್ರೌಂಡಿಗೆ ಹೋಗ್ತಿನಲ್ಲ, ಅಲ್ಲಿ ಮೈದಾನದ ಮೂಲೆಯಲ್ಲಿ ಈಗೊಂದು ವಾರದಿಂದ ಈ ಹಕ್ಕಿಪಿಕ್ಕಿಗಳೋ ಗುಡಾರ ಹಾಕಿಕೊಂಡಿದಾರೆ. ಈಯಮ್ಮ ಅದೇ ಗುಂಪಿಗೆ ಸೇರಿದವಳಾಗಿದ್ರೆ?”
“ಇರಬಹುದು, ಇಲ್ಲದೆಯೂ ಇರಬಹುದು. ಇಲ್ಲೇ ಸ್ವಲ್ಪ ಹೊತ್ತು ಕಾಯೋಣ. ಆಯಮ್ಮ ಮತ್ತೆ ಬರಬಹುದು”
ಕಾಲುಗಂಟೆ ಕಾದೆವು. ಬೇಸತ್ತು ಶಿವು “ಹೋಗೋಣ ಬಾ ಮಾರಾಯ, ಗ್ರೌಂಡ್ ಹತ್ರ ಹೋಗಿ ನೋಡೋಣ, ಕೇಳೋಣ. ಇಲ್ಲದಿದ್ದರೆ ಏನ್ಮಾಡೋದು? ಬೀಗ ಒಡೆಯೋದು, ಓನರ್ ತಾತನಿಗೆ ಹೊಸಾ ಬೀಗ ಬಿಟ್ಹೋಗೋದು.” ಇಬ್ಬರೂ ಕಾಲೆಳೆದುಕೊಂಡು ಸ್ಕೂಲ್ ಮೈದಾನದತ್ತ ನಡೆದೆವು. ನನಗೆ ಭಯ ಶುರುವಾಯ್ತು.
"ರಾತ್ರಿ ಬೇರೆ ಕಣೋ. ಗ್ರೌಂಡಿನಲ್ಲಿ ಹೇಗೆ ಹೋಗಿ ಹುಡುಕೋದು? ಮೊದಲೇ ದೊಂಬರವರು ಅಂತೀಯಾ. ಯಾರನ್ನು ಕೇಳೋದು? ಕತ್ತಲಾದ ಮೇಲೆ ಅಲ್ಲಿ ವಿಚಾರಿಸೋಕೆ ಹೋದ್ರೆ ಕೇಳೋಕೆ ಮುಂಚೇನೇ ಅಲ್ಲಿರೋರು ಗಲಾಟೆ ಮಾಡಿಬಿಟ್ರೆ?” “ಹಾಗೇನೂ ಆಗೋಲ್ಲ ಬಾ. ಅವರಲ್ಲೇ ಯಾರಾದರೂ ಒಬ್ಬ ಗಂಡಸ್ರನ್ನ ಕರೆದು, ಎಲ್ಲ ವಿಷಯ ವಿವರವಾಗಿ ಹೇಳಿ, ಆ ಹೆಂಗಸು ಅವರ ಗುಂಪಿನಲ್ಲಿದ್ದಾಳಾ ಅಂತ ಕೇಳೋದು, ಇಲ್ಲದಿದ್ದರೆ ಇಲ್ಲ”

ಮಾತನಾಡುತ್ತ ಕ್ರಿಕೆಟ್ ಮೈದಾನದ ಹತ್ತಿರ ಬಂದೆವು. ಬಯಲಿನ ಮೂಲೆಯ ಡೇರೆಗಳಲ್ಲಿ ಜನಸಂಚಲನ ಕಾಣುತ್ತಿತ್ತು. ಡೇರೆಗಳ ಹೊರಗೆ ಒಲೆಗಳಿಂದ ಹೊಗೆ ಏಳುತ್ತಿತ್ತು. ರೇಡಿಯೋದಲ್ಲಿ ಯಾವುದೋ ಹಿಂದಿ ಹಾಡು ಬರುತ್ತಿತ್ತು. ಯಾವನೋ ಒಬ್ಬ, ಕುಡಿದಿರಬೇಕು, ಏರುಧ್ವನಿಯಲ್ಲಿ ಯಾರನ್ನೋ ಬಯ್ಯುತ್ತಿದ್ದ. ನಾವು ಮೆಲ್ಲ ಮೆಲ್ಲನೆ ಡೇರೆಗಳ ಹತ್ತಿರ ನಡೆದೆವು.
“ಇದ್ಯಾಕೋ ಚೆನ್ನಾಗಿಲ್ಲ ಕಣೋ, ಸಂಜೆಹೊತ್ತು ಅವರನ್ನ ಮಾತಾಡ್ಸೋಕೆ ಹೋದರೆ ಬೇರೆ ಏನಕ್ಕೋ ಬಂದಿದೀವಿ ಅಂತ ಗಲಾಟೆ ಮಾಡಿದ್ರೆ?” “ಏನಾಗೋಲ್ಲ ಬಾ ಮಾರಾಯ. ನಾವಿಬ್ಬರಿಲ್ವಾ?”
“ಹಾಗಲ್ಲ ಕಣೋ ನಮ್ಮ ಪರ್ಸು, ವಾಚು...?” “ಹಾಗೇನಾದ್ರೂ ಗಲಾಟೆಯಾದ್ರೆ ಓಡ್ಹೋಗೋಣ ಅಷ್ಟೇ!”
“ಆದ್ರೂ, ಬೇಡ ಕಣೋ. ಆಯಮ್ಮ ಸಿಕ್ಕಲೇ ಇಲ್ಲ ಅಂದ್ಕೊಂಡ್ರಾಯ್ತು. ಕೀ ಸಿಗದೇ ಇದ್ರೆ ಏನ್ಮಾಡಬೇಕು ಅಂತ ಪ್ಲಾನ್ ಮಾಡಿದ್ದೆವೋ ಅದನ್ನೇ ಮಾಡಿದರಾಯ್ತು”
ನನ್ನ ನಿಲ್ಲದ ಸಂದೇಹಗಳಿಂದಾಗಿ ಅವನ ನಡಿಗೆಯೂ ನಿಧಾನವಾಯ್ತು, “ಹಾಗಂತೀಯಾ?” ಅಂದ.

ಹಿಂದಿನಿಂದ “ಏನ್ಸಾಮಿ?” ಎಂಬ ಧ್ವನಿ ಕೇಳಿ ಇಬ್ಬರೂ ಬೆಚ್ಚಿ ಬಿದ್ದೆವು; ಹಿಂತಿರುಗಿ ನೋಡಿದೆವು. ನಮ್ಮ ಬೆನ್ನ ಹಿಂದೇ ಅದೇ ಹೆಂಗಸು ನಿಂತಿದ್ದಳು, ಕಂಕುಳಲ್ಲಿ ಮಗು. ನನಗೆ ಮಾತೇ ಹೊರಡಲಿಲ್ಲ. ಶಿವು ಕೇಳಿದ, “ನೀವು ಅಲ್ಲಿ ಬಸ್‌ಸ್ಟಾಂಡಿನ ಹತ್ರ ಬಿದ್ರಲ್ಲ, ನಾವೂ ಅಲ್ಲೇ ಇದ್ದೆವು, ನಮ್ಮನೇ ಕೀ ಗೊಂಚಲನ್ನ ನಿಮ್ಮ ಕೈಯಲ್ಲಿ ಇಟ್ಟಿದ್ದೆ”
“ಎಂತಾ ಗೊಂಚಲು?” ಆಕೆ ತಿರುಗಿ ಪ್ರಶ್ನಿಸಿದಳು.
“ನಮ್ಮನೆ ಬೀಗದ ಕೈರೀ. ಯಾರೋ ಹೇಳಿದ್ರು, ಲೋಹದ ವಸ್ತು ಕೈಯಲ್ಲಿಟ್ಟರೆ ಎದ್ದೇಳ್ತೀರಿ ಅಂತಾ”

ಆಕೆ ನೇರವಾಗಿ ವಿಷಯಕ್ಕೆ ಬಂದಳು, “ಎಷ್ಟ್ ಕೊಡ್ತೀರಿ?” ಈವಾಗ ಪ್ರಶ್ನಿಸುವ ಸರದಿ ನಮ್ಮದು, “ಏನು?” “ಕಾಸು, ದುಡ್ಡು ಎಷ್ಟ್ ಕೊಡ್ತೀರಿ?” “ಯಾಕೆ ದುಡ್ಡು?” “ನಿಮ್ಮ ಚಾಬಿಗೊಂಚಲಿಗೆ?!” “ನಾವ್ಯಾಕೆ ದುಡ್ಡು ಕೊಡಬೇಕು? ನಮ್ಮನೆ ಕೀಗೊಂಚಲು ಅದು!” “ಈಗ ಅದು ನನ್ತಕ ಐತಲ್ಲಾ, ದುಡ್ಡು ಕೊಟ್ರೇ ಕೊಡೋದು!” ನಾವಿಬ್ಬರೂ ಮುಖಮುಖ ನೋಡಿಕೊಂಡೆವು. ದೂರದ ಡೇರೆಗಳ ಹತ್ತಿರದ ಜನರ ಗಮನ ಈಕಡೆ ಹರಿಯುತ್ತಿದೆ ಅನಿಸಿತು. “ಅಲ್ರಮ್ಮಾ, ನಿಮಗೆ ಸಹಾಯ ಮಾಡೋಣ ಅಂತಾ ನಾವು ಕೀಗೊಂಚಲು ಕೈಯಲ್ಲಿಟ್ಟರೆ ಈಗ ನಮ್ಮ ಹತ್ರಾನೇ ದುಡ್ಡು ಕೇಳ್ತೀರಲ್ಲ? ನೀವು ಬಿದ್ದಿರಿ ಅಂತ ತಾನೇ ನಿಮ್ಮ ಕೈಗೆ ನಾವು ಕೀಗೊಂಚಲು ಇಟ್ಟಿದ್ದು?” “ಸಹಾಯ ಮಾಡುದ್ರೇನು? ನೀವ್ಯಾಕೆ ಗೊಂಚಲ ಮರ್ತ್ ಹೋದ್ರಿ, ಬೇರೆಲ್ಲಾದ್ರೂ ಕಳ್ಕಂಡಿದ್ರೆ ಏನ್ಮಾಡ್ತಿದ್ರಿ? ಸುಮ್ನೆ ಮಾತು ಬೇಡ, ನೂರ್ರುಪಾಯ್ ಕೊಡಿ, ಕೀಗೊಂಚಲು ವಾಪ್ಸು ಕೊಡ್ತೀನಿ” ನಾವಿಬ್ಬರೂ ಬೆಚ್ಚಿಬಿದ್ದೆವು. ದೂರದ ಡೇರೆಯ ಹತ್ತಿರ ನಿಂತಿದ್ದ ಗಂಡಸೊಬ್ಬ ಅಲ್ಲಿಂದಲೇ ಕೂಗು ಹಾಕಿದ, “ಯಾರ್ರೋ ಅದು?”

“ನೋಡಿ ಇದೆಲ್ಲ ಚೆನ್ನಾಗಿರೋಲ್ಲ. ನಮ್ಮ ಕೀಗೊಂಚಲು ನಮಗೆ ಕೊಡಿ, ಅದನ್ನು ಇಟ್ಟುಕೊಂಡಾದ್ರೂ ನೀವೇನು ಮಾಡ್ತೀರಿ?”
"ಹಾಗಾದ್ರೆ ನಿಮ್ಮ ಕೀಗೊಂಚಲು ನನ್ತಕ ಇಲ್ಲ!”, ಅವಳು ನಿಷ್ಠುರವಾಗಿ ನುಡಿದಳು.
ಶಿವು ತಟ್ಟನೆ ನನ್ನೆಡೆಗೆ ತಿರುಗಿ “ಹೌದು ಕಣೋ, ಇವಾಗ ನೆನಪಾಯ್ತು ಅದು ಇಲ್ಲಿಲ್ಲ, ನೀರಿನ ಜಗ್ ವಾಪಸ್ಸು ಕೊಡೋಕೆ ಬೇಕರಿಗೆ ಹೋದ್ನಲ್ಲಾ, ಅಲ್ಲೇ ಬಿಟ್ಟಿದೀನಿ!” ನನಗೇನೂ ಗೊತ್ತಾಗಲಿಲ್ಲ. ಆ ಹೆಂಗಸು ಉದ್ಗಾರ ತೆಗೆದಳು, "ಹಾಂ! ಹಂಗಾದ್ರೆ ಇದೇನು?” ಅಂತ ಸೊಂಟದಿಂದ ಕೀಗೊಂಚಲು ತೆಗೆದು ತೋರಿದಳು ಮತ್ತು "ಹೋಗ್ರಿ, ಅಲ್ಲೇ ಹುಡಿಕ್ಕೋ ಹೋಗಿ!” ಅಂತ ನಕ್ಕಳು. ಅವಳ ಕಂಕುಳಲ್ಲಿದ್ದ ಮಗು ಕೇಕೆ ಹಾಕಿ ನಗುತ್ತ ಆಕೆಯ ಕೈಯಲ್ಲಿದ್ದ ಕೀಗೊಂಚಲಿನೆಡೆಗೆ ಕೈಚಾಚಿತು. ಆಕೆ ಮಗುವಿನ ಕೈಗೆ ಗೊಂಚಲನಿಟ್ಟು ನಕ್ಕು ನಮ್ಮೆಡೆಗೆ ನೋಡಿದಳು. ನನಗೆ ಕೋಪ-ಹತಾಶೆ ಉಕ್ಕಿ ಬಂದವು. ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ ಶಿವು ತಟ್ಟನೆ “ಓಡೋ!” ಅಂದ. ನನಗೆ ತಿಳಿಯುವಷ್ಟರಲ್ಲಿ ಅವನು ಮಗುವಿನ ಕೈಯಲ್ಲಿದ್ದ ಕೀಗೊಂಚಲು ಕಸಿದುಕೊಂಡು ಮಾರುದೂರ ಓಡಿಯಾಗಿತ್ತು.

ಆ ಹೆಂಗಸು ಜೋರಾಗಿ ಕಿರುಚಿದಳು, ನನ್ನ ಶರ್ಟಿನ ಕಾಲರ್ ಪಟ್ಟಿ ಹಿಡಿದೆಳೆದಳು. ನಾನು ನಡುಗಿ ಹೋದೆ. ಆಕಡೆ ಡೇರೆಗಳಿಂದ ಜನ ಹೊರಬರಲು ಶುರುವಾದರು. ತಟ್ಟನೆ ಕೈಕೊಸರಿಕೊಂಡು, ಆಕೆಯ ಹಿಡಿತದಿಂದ ಬಿಡಿಸಿಕೊಂಡು ನಾನೂ ಫೇರಿ ಕಿತ್ತೆ. ಬೈಗುಳಗಳು, ಕಿರುಚಾಟ ನಮ್ಮನ್ನು ಹಿಂಬಾಲಿಸಿದವು. ನಾನು ನಖಶಿಖಾಂತ ನಡುಗುತ್ತಿದ್ದೆ. ಎದೆಯೊಳಗೆ ಉಸಿರು ಸಿಕ್ಕಿ ಹಾಕಿಕೊಂಡಂತಿತ್ತು. ಇಬ್ಬರೂ ಓಡುತ್ತ ಮೈದಾನ ದಾಟಿ, ರೋಡು ತಲುಪಿ, ಮೊದಲು ಕಂಡ ತಿರುವಿನೊಳಕ್ಕೆ ತಿರುಗಿಕೊಂಡೆವು. ಓಟವನ್ನು ನಿಧಾನ ಮಾಡಿ, ಜಾಗಿಂಗ್ ಮಾಡುವಂತೆ ಮಾಡಿ, ನಡಿಗೆಗೆ ಬಂದೆವು. ಅಂತಹ ಏದುಸಿರಿನಲ್ಲೂ ಶಿವು ಗಹಗಹಿಸಿ ನಕ್ಕ. ನನಗೆ ಕಿರಿಕಿರಿಯಾಯ್ತು. “ಅವರ್ಯಾರಾದರೂ ಹಿಂದೇನೇ ಓಡಿ ಬಂದಿದ್ರೆ? ಬಾ ಓಡೋಣ...” “ಏ ಬಿಡೋ, ಏರಿಯಾ ಒಳಗೆ ನುಗ್ಗಿ ಬಂದು ಗಲಾಟೆ ಮಾಡೋಕೆ ಧೈರ್ಯ ಮಾಡೋಲ್ಲ ಅವರು”

ನಾವು ಯಾವ್ಯಾವುದೋ ಗಲ್ಲಿ ಸುತ್ತಿಕೊಂಡು ವಾಪಸ್ಸು ರೂಮಿನ ಹತ್ತಿರ ಬರುವಷ್ಟರಲ್ಲಿ ರಾತ್ರಿ ಒಂಬತ್ತಾಗಿತ್ತು. ನಮ್ಮ ಇನ್ನೊಬ್ಬ ಸಹಜೀವಿ, ಸ್ನೇಹಿತ ನಮಗೋಸ್ಕರ ಕಾಯುತ್ತಾ ಇದ್ದ. “ಏನ್ರೋ ನಾನು ಬಂದೇ ಅರ್ಧ ಗಂಟೆಯಾಯ್ತು. ಎಲ್ಲಿಗೆ ಹೋಗಿದ್ರಿ?” ನಾವು ದೊಡ್ಡ ಸಾಹಸ ಮಾಡಿದವರಂತೆ ಎಲ್ಲವನ್ನೂ ವರ್ಣಿಸಿದೆವು. ಅವನು ನಮ್ಮನ್ನೇ ಬೈದ. “ನೀವಿಬ್ರೂ ಮರೆಗುಳಿಗಳೇ! ಹೋಗಿ ಹೋಗಿ ಕೀಲಿಕೈನ ಆ ಹೆಂಗಸಿನ ಕೈಲೇ ಬಿಟ್ಟು ಬಂದಿದೀರಲ್ಲ! ಸುಮ್ನೇ ಏಷ್ಟೊಂದು ಕಿರಿಕ್ ಆಯ್ತು!” ನಾನು ನಕ್ಕು ಇವನ ಮುಖ ನೋಡಿದೆ, “ನಾಳೆ ಬೆಳಿಗ್ಗೆ ಕ್ರಿಕೆಟ್‌ಗೆ ಹೋದಾಗ ಆಯಮ್ಮ ನಿನ್ನನ್ನು ನೋಡಿ ಹಿಡ್ಕೊಂಡ್ ಬಿಟ್ರೆ ಏನ್ಮಾಡ್ತೀಯಾ?” “ಇಲ್ಲಪ್ಪ! ಫೀಲ್ಡ್ ತುಂಬ ಜನ ಇರ್ತಾರೆ, ಜಾಗಿಂಗು, ಕ್ರಿಕೆಟ್ಟು ಅಂತಾ ಆಡ್ತಾ ಇರ್ತಾರೆ. ಆ ಹೆಂಗಸಿಗೆ ಅಷ್ಟೆಲ್ಲ ಧೈರ್ಯ ಬರೋಲ್ಲ. ಅಷ್ಟಕ್ಕೂ ನಾಳೆ ಭಾನುವಾರ, ನಮ್ಮ ಕ್ರಿಕೆಟ್ ಟೀಮ್ ರಜಾ. ಸೋಮವಾರ ಹೋಗೋವಷ್ಟರಲ್ಲಿ ಆಕೆಗೂ ನಮ್ಮ ಮುಖ ಮರೆತು ಹೋಗಿರುತ್ತೆ” “ಸರೀ ಬಿಡೀ. ಈಗ ಊಟಕ್ಕೇನು ಮಾಡೋಣ? ಈವಾಗ ಅಡುಗೆ ಮಾಡೋಕೆ ಶುರುಮಾಡಿದ್ರೆ ಲೇಟಾಗುತ್ತೆ. ಆಮೇಲೆ ಸೀಡಿ-ಪಿಚ್ಚರ್ರು?” ನಾನೇ ಒಂದು ಐಡಿಯಾ ಕೊಟ್ಟೆ, “ನಡೀರಿ ಹಿಂದುಗಡೆ ಇರೋ ಆಂಧ್ರ ಮೆಸ್ಸಿಗೆ ಹೋಗೋಣ!”

ಊಟ ಮಾಡಿಕೊಂಡು ಬಂದು ಸೀಡಿ ನೋಡಲು ಕುಳಿತೆವು. ಚಿತ್ರ ವೀಕ್ಷಣೆಯ ನಡುವೆ ನಮ್ಮ ಚರ್ಚೆಯೂ ಸಾಗಿತ್ತು. “ಎಂಥಾ ಜನ ಮಾರಾಯ! ನಾವು ಬರೀ ಪಟ್ಟಣದ ಜನ ಕೆಟ್ಟು ಹೋಗಿದಾರೆ ಅಂದ್ಕೊಂಡ್ರೆ ಊರೂರು ಸುತ್ತೋ ಜನರೂ ಕೆಟ್ಟು ಕೆರ ಹಿಡ್ದಿರ್ತಾರೆ. ಪ್ರತಿದಿನದ ಅವಶ್ಯಕತೆಗಳಿಗಷ್ಟೇ ಬದುಕುವ ಜನರಿಗೂ ಇಂಥಾ ಯೋಚನೆಗಳು ಬಂದು ಬಿಟ್ಟರೆ, ಇದು ನಿಜವಾದ ಅಡಾಪ್ಟಬಲಿಟಿನೇ ಹೌದು!”

“ಹೌದು, ಆದ್ರೆ ಹೊಂದಾಣಿಕೆ ನಮ್ಮ ವ್ಯಕ್ತಿತ್ವದ ಪ್ರಕಾರವೇ ಆಗುತ್ತೆ ಅನ್ನೋದೂ ನಿಜ ನೋಡು. ನಮ್ಮ ಕಡೆ ಬರೋ ಅಲೆಮಾರಿ ಸಿದ್ಧಿಗಳೆಲ್ಲ ಎಷ್ಟು ಒಳ್ಳೆಯವರಿರ್ತಾರೆ ಗೊತ್ತಾ? ನಮ್ಮಜ್ಜ ಪ್ರತೀವರುಷ ಮಹಾನವಮಿಗೆ ತೊಗಲುಬೊಂಬೆ ಆಡಿಸ್ಲಿಕ್ಕೆ ಬರ್ತಿದ್ದೋರ ಬಗ್ಗೆ ಹೇಳ್ತಿದ್ದ. ಊರಿಗೆ ಬಂದು, ತಳವೂರಿ, ಒಂದೊಳ್ಳೇ ದಿನ ತೊಗಲು ಬೊಂಬೆ ಆಟ ಆಡಿಸಿ, ಹೋಗುವ ದಿನ ದವಸ-ಧಾನ್ಯ ಕಲೆ ಹಾಕಿ, ಊರನ್ನು ಹರಸಿ, ನಮಸ್ಕಾರ ಮಾಡಿ ಹೋಗುತ್ತಿದ್ದರಂತೆ. ಮುಂದಿನ ವರ್ಷ ಬರೋದ್ರಲ್ಲಿ ಅವರೊಳಗೇ ಒಂದು ಮದುವೆ, ಒಂದು ಹೆರಿಗೆ, ಒಬ್ಬಳು ಬಾಣಂತಿ. ಆದ್ರೆ ಯಾವತ್ತಿಗೂ ಅವರು ಊರಿನ ಜನರನ್ನ ದುರುಪಯೋಗ ಪಡಿಸಿಕೊಳ್ಲಿಲ್ಲವಂತೆ. ಅಷ್ಟೇ ಅಳತೆ ಧಾನ್ಯ, ಅವೇ ಹಳೇ ಬಟ್ಟೆ. ಒಂದ್ವರ್ಷ ಊರಿನ ಗೌಡಿತಿ ಸೇರಿನಲ್ಲಿ ಧಾನ್ಯ ತಂದು ಸಿದ್ಧಿಗಳ ಚೀಲಕ್ಕೆ ಸುರೀವಾಗ ಆಕೆಯ ಬೆರಳಲ್ಲಿದ್ದ ಉಂಗುರಾನೂ ಬಿದ್ದು ಬಿಟ್ಟಿತ್ತಂತೆ. ಆಕೆಗೆ ಅದು ಗೊತ್ತಾಗಿದ್ದು ಮಾರನೇ ದಿನ ಬೆಳಿಗ್ಗೇನೇ. ರತ್ನದುಂಗುರ! ಸಿದ್ಧಿಗಳು ಆಗಲೇ ಊರು ಬಿಟ್ಟಿದ್ದರು, ಇವರು ಉಂಗುರದಾಸೇನೂ ಬಿಟ್ಟರು. ಆದರೆ ಒಂದೇ ವಾರಕ್ಕೆ ಸಿದ್ಧಿಗಳ ತಂಡ ವಾಪಸ್ಸು ಬಂದೇ ಬಿಟ್ಟಿತಲ್ಲಾ! ಬಂದವರೇ ಗೌಡರ ಮನೆಗೆ ಉಂಗುರ ಒಪ್ಪಿಸಿ, ಊರನ್ನೇ ಕ್ಷಮೆ ಕೇಳಿ ಇನ್ನೊಮ್ಮೆ ಧನ-ಧಾನ್ಯ ಕಲೆ ಹಾಕದೇ ರಾಮಾಯಣದ ಮುದ್ರೆಯುಂಗುರದ ಕಥೆಯಾಡಿ ಹೋದರಂತೆ. ಗೌಡರು ಸುಮ್ಮನೆ ಮಾತಿಗೆ ಮುತ್ತಿನುಂಗುರ ಇಟ್ಟುಕೋ ಬಹುದಾಗಿತ್ತಲ್ಲ ಅಂದರೆ, ‘ಎರಡೊತ್ತು ಉಂಡರೂ ಮಿಗುವಷ್ಟು ಕಾಳು ಕಡಿ ಪ್ರತಿಯೂರಿನಲ್ಲೂ ಸಿಗುತ್ತದೆ, ನಚ್ಚಗಿರಲು ಬೇಕಾದಷ್ಟು ಬಟ್ಟೆಬರೆ, ಜೀವನಕ್ಕೆ ತೊಗಲುಬೊಂಬೆ ಇರುವಾಗ ಮುತ್ತಿನುಂಗುರ ಇಟ್ಟುಕೊಂಡು, ಮಹಲು ಕಟ್ಟಿ ಅಲೆದಾಟ ಬಿಡಲಾದೀತೇ?’ ಅಂತ ಕೇಳಿದ್ದನಂತೆ ಸಿದ್ಧಿಗಳ ಮುಖಂಡ”

“ತುಂಬಾ ಒಳ್ಳೇ ಕತೆ. ಆದರೆ ಕಾಲ ಬದಲಾಗಿದೆ, ಮೌಲ್ಯಗಳೂ ಬದಲಾಗಿವೆ, ಹಾಗಾಗಿ ಸಮಾಜದೆಡೆಗಿನ ನಮ್ಮ ಹೊಂದಾಣಿಕೆಯ ಸೂತ್ರಗಳೂ ಬದಲಾಗಿ ಹೋಗಿವೆ...” ನಮ್ಮ ಚರ್ಚೆ, ಸಿನೆಮಾ ಮುಗಿದು ಹಾಸಿಗೆಯ ಮೇಲೆ ಉರುಳಿಕೊಂಡಾಗಲೂ ಮುಂದುವರೆದಿತ್ತು. ಕೊನೆಗೂ ಒಬ್ಬೊಬ್ಬರೇ ನಿದ್ರಾವಶರಾದಾಗ ಸಮಯ ನಡುರಾತ್ರಿ ಮೀರಿತ್ತು.

* * * *

ನಿದ್ದೆಯ ಮಂಪರು, ಯಾರೋ ಕರೆಯುತ್ತಿದ್ದರು, ಕನಸೋ ನಿಜವೋ ಗೊತ್ತಾಗಲಿಲ್ಲ. ಅಂಟಿಕೊಳ್ಳುತ್ತಿದ್ದ ಕಣ್ಣುಗಳನ್ನು ತೆರೆದು ಗಡಿಯಾರದೆಡೆಗೆ ನೋಡಿದೆ, ಆಗಲೇ ಭಾನುವಾರದ ಬೆಳಗಿನ ಎಂಟೂ ಮುಕ್ಕಾಲು. ಕಿಟಕಿಯ ತೆರೆ-ತೆರೆ ಗಾಜಿನಿಂದ ಸೂರ್ಯನ ಹೊಂಗಿರಣಗಳು ರೂಮಿನ ತುಂಬ ಚೆಲ್ಲಿದ್ದವು. ಯಾರು ಕರೆದಿದ್ದು ಅಂತಾ ಯೋಚಿಸುತ್ತಿರುವಾಗಲೇ ಮತ್ತೆ ಧ್ವನಿ ಕೇಳಿಸಿತು, “ಅಮ್ಮಾ, ಭಿಕ್ಷೆ ಹಾಕಿ ತಾಯೀ...” ಸ್ನೇಹಿತರಿಬ್ಬರೂ ಕಿವುಡರಂತೆ ಹಾಯಾಗಿ ಮಲಗಿದ್ದರು. “ಇಷ್ಟು ಬೆಳಿಗ್ಗೇನೇ ಮನೆ ಬಾಗಿಲು ಹಾಕಿದ್ದರೂ ಮುಂದೆ ಹೋಗದೇ ಕಿರುಚುತ್ತಿದ್ದಾರಲ್ಲ. ಹೊರಗಡೆ ಬಾಗಿಲಿಗೆ ಬೀಗ ಹಾಕಿದ್ದರೆ ಮಾತ್ರ ಮುಂದೆ ಹೋಗುತ್ತಾರೇನೋ” ಅಂತ ಶಪಿಸಿಕೊಂಡೇ ನಮ್ಮ ಚಿಲ್ಲರೆಯ ಗೋಲಕದಿಂದ ಐವತ್ತು ಪೈಸೆ ತೆಗೆದುಕೊಂಡು ನಿದ್ದೆ ಕಣ್ಣುಗಳಲ್ಲೇ ತಡವರಿಸುತ್ತ ಬಂದು ಬಾಗಿಲು ತೆರೆದೆ. ಚಳಿಗಾಲದ ಸೂರ್ಯಕಿರಣಗಳು ಕಣ್ಣು ಕುಕ್ಕಿದವು. ಒಂದು ಕೈ ಬಿಸಿಲಿಗೆ ಅಡ್ಡ ಹಿಡಿದು ಇನ್ನೊಂದು ಕೈಯಲ್ಲಿ ಐವತ್ತು ಪೈಸೆಯನ್ನು ಮುಂದಕ್ಕೆ ಚಾಚಿ ನೋಡಿದೆ, ರಾತ್ರಿ ಸಿಕ್ಕ ಹೆಂಗಸು ಅದೇ ಜೋಳಿಗೆ ಹೊತ್ತುಕೊಂಡು ಭಿಕ್ಷೆಯ ತಟ್ಟೆಯೊಂದಿಗೆ ನಿಂತಿದ್ದಳು, ಅವಳ ಕಂಕುಳಲ್ಲಿದ್ದ ಮಗು ಅದೇ ನಗು ನಗುತ್ತಿತ್ತು.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4 (3 ಓಟುಗಳು)
prabhu's picture
ಮಂಗಳ, 14/07/2009 - 21:50 ರಂದು prabhu ಅವರು ಹೇಳುತ್ತಾರೆ
ಶಿವಕುಮಾರ ಕತೆ ಉತ್ತಮವಾಗಿದೆ.

ಶಿವಕುಮಾರ ಕತೆ ಉತ್ತಮವಾಗಿದೆ.

ಬಾಲ ಚಂದ್ರ's picture
ಶುಕ್ರ, 12/06/2009 - 18:07 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಶಿವಣ್ಣ, ಅದ್ಭುತವಾದ ಕಥೆ,

ಶಿವಣ್ಣ,
ಅದ್ಭುತವಾದ ಕಥೆ, ಅನುಭವವನ್ನು ಸೃಜನಶೀಲತೆಯೊಡನೆ ಬೆರಸಿ ಕೊಟ್ಟ ರಸಪಾಕವಿದು. ಅದಕ್ಕೇ ಉಣ್ಣುವಾಗೆಲ್ಲ ನಮ್ಮ ವೈಯಕ್ತಿಕವಾದ ನೆನಪುಗಳನ್ನು ನೆಂಚಿಕೊಳ್ಳುತ್ತೇವೆ

ಸಸ್ನೇಹ
ಬಾಲ ಚಂದ್ರ

ಶಿವಕುಮಾರ ಕೆ. ಎಸ್.'s picture
ಬುಧ, 29/04/2009 - 08:43 ರಂದು ಶಿವಕುಮಾರ ಕೆ. ಎಸ್. ಅವರು ಹೇಳುತ್ತಾರೆ
ಧನ್ಯವಾದಗಳು ಅರ್ಚನಾ.. ಇದೊಂಥರಾ

ಧನ್ಯವಾದಗಳು ಅರ್ಚನಾ..
ಇದೊಂಥರಾ mix-and-match ಕತೆ ನಾವು ವಾಕಿಂಗ್ ಹೋಗಿದ್ದು, ಆ ಹೆಂಗಸು ಬಿದ್ದಿದ್ದು, ನೀರು ಹಾಕಿದ್ದು, ಕೀಲಿಕೈ ಕೊಟ್ಟದ್ದೆಲ್ಲ ನಿಜ.. ಮುಂದಿನದೆಲ್ಲ ಹೀಗಾಗಿದ್ರೆ ಹೇಗಿರ್ತಿತ್ತು ಅನ್ನೋ creative-libertyಯ ಕಸರತ್ತು... ಜೊತೆಗೆ ನಾನು ಬಾಲ್ಯದಲ್ಲಿ ನೋಡಿದ್ದ ತೊಗಲು ಬೊಂಬೆಯವರ ಬಗ್ಗೆ ನನ್ನವ್ವ ಯಾವಾಗಲೋ ಹೇಳಿದ್ದ ಸಣ್ಣ ಕತೆಯ ಕೂಡಿಕೆ.. Smile

ಧನ್ಯವಾದಗಳು ಸ್ವಪ್ನಾ ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ! ನನ್ನ 'ಮೊಬೈಲಾಗಿ ಕಾಡಿತ್ತು ಮಾಯೆ' ಅಂಥಾ ಒಂದು ಅನುಭವದಿಂದಲೇ ಮೂಡಿದ್ದು Tongue :P

Swapnashashidhar Bhat's picture
ಬುಧ, 22/04/2009 - 21:18 ರಂದು Swapnashashidha... ಅವರು ಹೇಳುತ್ತಾರೆ
ಎಲ್ಲ ಮನಸುಗಳಲ್ಲಿಯೂ ಹೀಗೊಂದು

ಎಲ್ಲ ಮನಸುಗಳಲ್ಲಿಯೂ ಹೀಗೊಂದು ಹೆಂಗಸು ಇರುತ್ತಾಳೇನೊ... ನಮಗೂ ಅಕಸ್ಮಾತ ದಾರಿಯಲ್ಲಿ ಏನಾದರೂ ವಸ್ತು ಸಿಕ್ಕರೆ ಮೊಟ್ಟಮೊದಲು, ಒಂದೇ ಒಂದು ಸಾರಿ ಆದರೂ ಅದನ್ನು ಇಟ್ಟುಕೊಳ್ಳೊ ಮನಸ್ಸಾಗುತ್ತ ದೆ. ಆತ್ಮಸಾಕ್ಕ್ಷಿಗೆ ತಲೆ ಬಾಗಿ ಅದನ್ನು ಕಳೆದುಕೊಂಡವರಿಗೆ ಮರಳಿಸುವ ಪ್ರಯತ್ನ ಮಾಡುತ್ತೇವೆ.. ಆದರೂ ಮರಳಿಕೊಡುವ ಸಂದರ್ಬದಲ್ಲಿ ಕಳೆದುಕೊಂಡವರು ಏನಾದರೂ ಪ್ರತಿಪಲ ನೀಡುವರೇನೋ ಎಂದು ನಿರೀಕ್ಕ್ಷಿಸುತ್ತೇವೆ... ಸದ್ದಾಗದಂತೆ...

ಅಚ್ಚುಹೆಗಡೆ's picture
ಬುಧ, 22/04/2009 - 13:32 ರಂದು ಅಚ್ಚುಹೆಗಡೆ ಅವರು ಹೇಳುತ್ತಾರೆ
ಶಿವಕುಮಾರ್ , ‘ಎರಡೊತ್ತು ಉಂಡರೂ

ಶಿವಕುಮಾರ್ ,
‘ಎರಡೊತ್ತು ಉಂಡರೂ ಮಿಗುವಷ್ಟು ಕಾಳು ಕಡಿ ಪ್ರತಿಯೂರಿನಲ್ಲೂ ಸಿಗುತ್ತದೆ, ನಚ್ಚಗಿರಲು ಬೇಕಾದಷ್ಟು ಬಟ್ಟೆಬರೆ, ಜೀವನಕ್ಕೆ ತೊಗಲುಬೊಂಬೆ ಇರುವಾಗ ಮುತ್ತಿನುಂಗುರ ಇಟ್ಟುಕೊಂಡು, ಮಹಲು ಕಟ್ಟಿ ಅಲೆದಾಟ ಬಿಡಲಾದೀತೇ?’ ಎಂಬ ಒಂದು ವಾಕ್ಯ ಇಡಿ ಕಥೆಯನ್ನು ವರುಷಗಳವರೆಗೆ ನೆನಪಿನಲ್ಲಿಡುತ್ತದೆ ಅಂತ ನನ್ನ ಭಾವನೆ.
ಒಳ್ಳೆಯ ಕಥೆ. Cool

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
4 + 12 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content