ನಾವು ಲೇಹ್-ಲದ್ದಾಕ್ ಸೈಕಲಿಂಗ್ ಎಕ್ಸ್‌ಪೆಡಿಷನ್ ಶುರು ಮಾಡಿದ್ದು ಸೆಪ್ಟೆಂಬರ್ ಒಂಭತ್ತರ ಭಾನುವಾರ. ಅಂದು ಲೇಹ್ -ಶ್ರೀನಗರ ಹೆದ್ದಾರಿಯಲ್ಲಿ ಸೈಕಲ್ ಮೇಲೆ ನಾವು ಕ್ರಮಿಸಬೇಕಾಗಿದ್ದ ದೂರ ಸರಿಸುಮಾರು ನಲವತ್ತೈದು ಕಿಲೋ ಮೀಟರ್‌ಗಳು. ಮೊದಲನೇ ದಿನವಾದುದರಿಂದ ನಾನೂ ನನ್ನೊಬ್ಬ ಸ್ನೇಹಿತನೂ ಹುಮ್ಮಸ್ಸಿನಿಂದ ಮೊದಲ ಏಳೆಂಟು ಕಿಲೋ ಮೀಟರ್ ಇಳಿಜಾರು ರಸ್ತೆಯನ್ನು ತಂಡದ ಉಳಿದೆಲ್ಲರಿಗಿಂತ ಮುಂದಾಗಿ ಮೊದಮೊದಲಿಗೇ ಮುಗಿಸಿಬಿಟ್ಟೆವು. ಆಮೇಲೆ ಶುರುವಾಯಿತು ನಮ್ಮ ಊರ್ಧ್ವಗಮನ!
ಲೇಹ್ ಪೇಟೆ ಬಿಟ್ಟು, ವಿಮಾನ ನಿಲ್ದಾಣದ ಮುಂದೆ ಹಾದು, ಭಾರತೀಯ ಸೈನ್ಯದ ವಸಾಹತುಗಳನ್ನೆಲ್ಲ ನಾಮುಂದು-ತಾಮುಂದು ಎಂದುಕೊಂಡು ದಾಟಿದಾಗ ನಮ್ಮ ತಂಡದ ಉಳಿದವರೆಲ್ಲ ಇನ್ನೂ ಲೇಹ್‌ನ ಸರಹದ್ದಿನೊಳಗೇ ಇದ್ದರೇನೋ? ಆ ನಂತರ ಹೆದ್ದಾರಿ ಏರುಮುಖವಾಯಿತು. ನಮ್ಮ ಗೇರ್ ಸೈಕಲ್‌ಗಳಲ್ಲಿ ಹಿಂದಿನ ದಿನ ಕಲಿತಂತೆ ಗೇರ್ ಇಳಿಸಿಕೊಂಡು, ನಿಧಾನ ಗತಿಯಲ್ಲಿ ಸೈಕಲ್ ತುಳಿಯುತ್ತ, ಆಮೆ ನಡೆಯಲ್ಲಿ ಏದುಸಿರು ಬಿಡುತ್ತ ಏರನ್ನು ಹತ್ತತೊಡಗಿದೆವು. ಎರಡು ಕಿಲೋಮೀಟರ್ ಹೀಗೇ ಸಾಗುವಷ್ಟರಲ್ಲಿ ನನಗೆ ನನ್ನ ದೈಹಿಕ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮೂಡಲಾರಂಭಿಸಿತು. ಈ ಸಾಹಸಯಾತ್ರೆಗೋಸ್ಕರ ತಿಂಗಳುಗಟ್ಟಲೆ ಬೆಂಗಳೂರಿನ ನನ್ನ ಆಫೀಸಿನ ಜಿಮ್ಮಿನಲ್ಲಿ ಕಸರತ್ತು ಮಾಡಿದ್ದು, ದಿನಕ್ಕೆ ಏಳೆಂಟು ಕಿಲೋಮೀಟರ್‌ಗಟ್ಟಲೆ ಸೈಕಲ್ ತುಳಿದಿದ್ದು ಎಲ್ಲ ವ್ಯರ್ಥವಾಯಿತೇನೋ ಅನ್ನಿಸಿತು. ಮೊದಲನೇ ದಿನವೇ ಹೀಗಾದರೆ ಇನ್ನು ಐದು ದಿನದ ಇನ್ನೂರೈವತ್ತು ಕಿಲೋಮೀಟರ್‌ಗಳ ಸೈಕಲಿಂಗ್ ಕನಸೇ ಸರಿ ಅನಿಸಲಾರಂಭಿಸಿ ಬೇಸರವಾಗತೊಡಗಿತ್ತು. ಅಷ್ಟರಲ್ಲಿ ನನ್ನ ಜಿಮ್‌ನ ಕೋಚ್‌ನ ಒಂದಷ್ಟು ಪಾಠಗಳು, ನನ್ನೊಟ್ಟಿಗಿದ್ದ ನನ್ನ ಅತ್ಯುತ್ಸಾಹಿ ಸ್ನೇಹಿತನ ಸಲಹೆಗಳು ಸ್ವಲ್ಪವಾದರೂ ನನ್ನ ಸಂಕಷ್ಟವನ್ನು ದೂರ ಮಾಡುವಲ್ಲಿ ಯ?ಶಸ್ವಿಯಾದವು.
ಹೀಗೇ ಮೂರು ಕಿಲೋಮೀಟರ್ ಬರೀ ಏರು ರಸ್ತೆಯಲ್ಲಿ ಸೈಕಲ್ ತುಳಿದು, ಇನ್ನೇನು ಸಮತಟ್ಟಾದ ಜಾಗ ಬಂತು ಅಂದುಕೊಂಡು ಖುಷಿಯಾದೆವು. ಆದರೆ ಅದೆಲ್ಲ ಸುಳ್ಳಷ್ಟೇ. ಕಣ್ಣಿಗೆ ಸಮತಟ್ಟಿನಂತೆ ಕಂಡರೂ ರಸ್ತೆ, ಈ ಕಡೆಯಿಂದ ಸ್ವಲ್ಪ-ಸ್ವಲ್ಪವೇ ಏರು-ಏರಾಗೇ ಇತ್ತು. ಹಾಕಿಕೊಂಡಿದ್ದ ಸ್ವೆಟರ್‌ನೊಳಗೆ ಬೆವರಿ ನೀರಿಳಿಸಿಕೊಂಡು, ಮೂಗಿನಿಂದ ಸುರಿಯುತ್ತಿದ್ದುದನ್ನು ಸ್ವೆಟರಿನ ತೋಳಿಗೇ ತೀಡಿಕೊಂಡು, ಆಗೀಗ ನಿಂತು ಸ್ವಲ್ಪ ಸ್ವಲ್ಪವೇ ನೀರು ಕುಡಿದುಕೊಂಡು, ಚಾಕಲೇಟ್ ತಿಂದುಕೊಂಡು ನಾವು ಈ ಮೋಸದ ರಸ್ತೆಯನ್ನು ಕ್ರಮಿಸಲಾರಂಭಿದೆವು.
ಆ ದಿನ ಬೆಳಿಗ್ಗೆ ನಮ್ಮ ತಂಡ ಲೇಹ್‌ನಿಂದ ಹೊರಡುವಾಗ ನಮ್ಮೆಲ್ಲರನ್ನು (ಹನ್ನೆರಡು ಜನ) ಸಾಲಾಗಿ ನಿಲ್ಲಿಸಿ, ನಮ್ಮ ಬೇಸ್ ಕ್ಯಾಂಪಿನ ಅಡಿಗೆಯವನು ಪೂಜೆ ಮಾಡಿ, ಈಡುಗಾಯಿ ಹೊಡೆದು, ಧ್ವಜ ಬೀಸಿ ನಮ್ಮನ್ನು ಬೀಳ್ಕೊಡುವಾಗ ನಮ್ಮ ಫೀಲ್ಡ್ ಡೈರೆಕ್ಟರ್ ನಮಗೆ ಈ ದಾರಿಯಲ್ಲಿ ಸಿಗುವ ಒಂದು ಗುರುದ್ವಾರದ ಬಗ್ಗೆ ಹೇಳಿದ್ದರು. ಇಂದು ಭಾನುವಾರವಾಗಿದ್ದುದರಿಂದ ಅಲ್ಲಿ ಲಂಗರ್(ಅನ್ನ ಸಂತರ್ಪಣೆ) ವ್ಯವಸ್ಥೆಯಿರುತ್ತದೆಯೆಂದೂ ಹೇಳಿ ನಮ್ಮಲ್ಲಿ ಹುಮ್ಮಸ್ಸು ತುಂಬಿದ್ದರು. ಹಾಗಾಗಿ, ಈಗ ಬಂತು ಗುರುದ್ವಾರ, ಈಗ ಇಳಿಜಾರು ಶುರುವಾಯ್ತು, ಇನ್ನೇನು ಈ ತಿರುವು ತಿರುಗಿದರೆ ಇಳೀಜಾರೇ ಇಳೀಜಾರು ಅಂತೆಲ್ಲ ಮನಸ್ಸಿಗೆ ಸುಳ್ಳೇ ಆಶ್ವಾಸನೆ ಕೊಟ್ಟುಕೊಂಡು ಮದ್ಯಾಹ್ನ ಹನ್ನೆರಡೂವರೆಗೆಲ್ಲ ಸುಮಾರು ಇಪ್ಪತ್ತನಾಲ್ಕು ಕಿಲೋಮೀಟರ್ ಸೈಕಲ್ ತುಳಿದೇ ಬಿಟ್ಟೆವು.
ಕೊನೆಗೂ. ಇನ್ನೇನು ನಮ್ಮಿಬ್ಬರ ನಡುವೆ ನಾವು ಹೇಳಿಕೊಂಡ ಎಲ್ಲ ಸುಳ್ಳುಗಳೂ ನಿಜವಾಗಿ ಇಳೀಜಾರು ಶುರುವಾಗಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ರಸ್ತೆ ಬದಿಯಲ್ಲಿ ಬೋರ್ಡ್ ಕಾಣಿಸಿತು, "ಗುರುದ್ವಾರ-ಪತ್ಥರ್ ಸಾಹಿಬ್ ೦.೫ ಕಿ.ಮೀ."
...ಹಿಮಾಲಯದ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಲೇಹ್ (ಲದ್ದಾಕ್) ನಗರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ಲೇಹ್-ಶ್ರೀನಗರ ಹೆದ್ದಾರಿಯ ಮೇಲೆ ಒಂದು ಗುರುದ್ವಾರವಿದೆ - ಪತ್ಥರ್ ಸಾಹಿಬ್. ಐತಿಹ್ಯಗಳ ಪ್ರಕಾರ, ಹಿಂದೆ ಸಾವಿರದೈದುನೂರಾ ಹದಿನೇಳರ ಸುಮಾರಿನಲ್ಲಿ ಇಲ್ಲಿ ರಸ್ತೆಯ ಎಡಕ್ಕಿರುವ ಕಲ್ಲುಗುಡ್ಡದ ಮೇಲೆ ದುಷ್ಟ ದೈತ್ಯನೊಬ್ಬನಿದ್ದನು. ಅವನು ದಾರಿಹೋಕರನ್ನೂ, ಅಕ್ಕಪಕ್ಕದ ಹಳ್ಳಿಯವರನ್ನೂ ಪರಿಪರಿಯಾಗಿ ಗೋಳು ಹೊಯ್ದುಕೊಳ್ಳುತ್ತಿದ್ದನು. ಕೊನೆಗೂ ಆ ಜನರೆಲ್ಲರ ಗೋಳಿಗೆ ಕೊನೆಯೆಂಬಂತೆ, ಅವರೆಲ್ಲರ ಪ್ರಾರ್ಥನೆಯ ಫಲವೋ ಎಂಬಂತೆ ಶ್ರೀಗುರು ನಾನಕ್‌ರು (ಸಿಕ್ಕಿಂ ನೇಪಾಳ, ಟಿಬೇಟ್ ಮತ್ತು ಯಾರ್ಕಂಡ್ ದಾರಿಯಾಗಿ) ಈ ಜಾಗಕ್ಕೆ ಬಂದಿಳಿದರು. ಈ ಕಲ್ಲುಗುಡ್ಡದ ತಳದಲ್ಲಿ ಹರಿಯುತ್ತಿದ್ದ ಸಣ್ಣ ಝರಿಯ ದಡದಲ್ಲಿ ಬಿಡಾರ ಹೂಡಿದ ಶ್ರೀಗುರು ಸುತ್ತಮುತ್ತಲಿನ ಹಳ್ಳಿಯವರ ಕಷ್ಟ ಸುಖ ವಿಚಾರಿಸಿಕೊಳ್ಳುತ್ತ, ಅವರಿಗೆಲ್ಲ ತಮ್ಮ ದೈವೀಕವಾದ ಪ್ರೇಮಧಾರೆಯನ್ನೆರೆಯುತ್ತ ಅವರೊಳಗೆಲ್ಲ ನಾನಕ-ಲಾಮಾ ಎಂದು ಪ್ರಸಿದ್ಧಿಯಾದರು. ಇದನ್ನೆಲ್ಲ ನೋಡುತ್ತಿದ್ದ ಆ ದುಷ್ಟ ದೈತ್ಯನಿಗೆ ಸಿಟ್ಟು ಬಂದು, ಒಂದು ದಿನ ಜಪಕ್ಕೆ ಕುಳಿತಿದ್ದ ಶ್ರೀಗುರುವನ್ನು ಸಾಯಿಸಿಬಿಡಬೇಕು ಎಂದುಕೊಂಡು, ಈ ಕಲ್ಲುಗುಡ್ಡದ ತುದಿಯಿಂದ ಬೃಹತ್ತಾದ ಕಲ್ಲುಬಂಡೆಯೊಂದನ್ನು ಅವರು ಕುಳಿತಿದ್ದ ದಿಕ್ಕಿಗೆ ಉರುಳಿಬಿಟ್ಟನು. ಗುಡ್ಡದಿಂದ ಉರುಳಿಕೊಂಡು ಬಂದ ಕಲ್ಲು ಬಂಡೆಯು ಶ್ರೀಗುರುವಿನ ದೇಹ ತಾಕುತ್ತಲೇ ಮೇಣದ ಮುದ್ದೆಯಾದಂತಾಯಿತು. ಶ್ರೀಗುರುವಿನ ಬೆನ್ನಿನ ಅಚ್ಚು ಬಂಡೆಯೊಳಗೆ, ಸಕ್ಕರೆ ಅಚ್ಚಿನೊಳಗೆ ಸಕ್ಕರೆಯ ಪಾಕ ಮೂಡಿಸುವ ಆಕಾರದಂತೆ ಮೂಡಿತು. ಶ್ರೀಗುರು ಸತ್ತು ಹೋಗಿರಬೇಕೆಂದು ಸಂತಸದಿಂದ ದೈತ್ಯ ಗುಡ್ಡವಿಳಿದು ಬಂದು ನೋಡುತ್ತಾನೆ, ಕಲ್ಲುಬಂಡೆ ಅವರ ಬೆನ್ನಿಗೆ ಒರಗಿಕೊಂಡಂತಿದೆ ಮತ್ತು ಶ್ರೀಗುರು ಅಚಲರಾಗಿ ತಮ್ಮ ಯೋಗಾಮುದ್ರೆಯಲ್ಲಿದ್ದಾರೆ! ಮತ್ತಷ್ಟು ಕ್ರೋಧಿತನಾದ ಆ ದೈತ್ಯ ಏನಾದರೂ ಮಾಡಿ ಅವರ ಮೇಲಕ್ಕೆ ತಳ್ಳಲೇ ಬೇಕು ಎಂದುಕೊಂಡು ತನ್ನ ಎಡಗಾಲಿನಿಂದ ಆ ಕಲ್ಲನ್ನು ಒದ್ದನು. ಹೀಗೆ ಒದೆಯಲಾಗಿ ಮೇಣದಂತಾಗಿದ್ದ ಕಲ್ಲಿನೊಳಗೆ ಅವನ ಕಾಲು ಸಿಕ್ಕಿಕೊಂಡಿತು. ಗಾಬರಿಯಿಂದ ಆ ದೈತ್ಯ ಎಷ್ಟೆಲ್ಲ ಪ್ರಯತ್ನ ಪಟ್ಟರೂ ತನ್ನ ಕಾಲನ್ನು ಬಿಡಿಸಿಕೊಳ್ಳಲಾಗಲಿಲ್ಲ. ಕೊನೆಗೆ ಅವನಿಗೆ ಬುದ್ಧಿಬಂದು, ತನ್ನ ತಪ್ಪಿನ ಅರಿವಾಗಿ, ಶ್ರೀಗುರುವಿನ ಕ್ಷಮೆಯಾಚಿಸಿದನು. ಆಗ ಶ್ರೀಗುರುವು ಅವನ ಮೇಲೆ ಕೃಪೆ ದೋರಿ, ಬಂಡೆಗೆ ಅಂಟಿಕೊಂಡಿದ್ದ ಅವನ ಕಾಲು ಬಿಡಿಸಿ, ಅವನಿಗೆ ಬುದ್ಧಿ ಹೇಳಿ, ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿದರು.
ಮುಂದೆ ಶ್ರೀಗುರು ನಾನಕರು ಕಾರ್ಗಿಲ್ ಮೂಲಕ ಶ್ರೀನಗರಕ್ಕೆ ತಮ್ಮ ಪರ್ಯಟನೆ ಮುಂದುವರೆಸಿದರು. ಅವರ ಮೇಲೆ ಉರುಳಿಬಿದ್ದ ಕಲ್ಲು, ಕಲ್ಲಿನೊಳಗೆ ಅವರ ದಿವ್ಯ ಶರೀರದ ಅಚ್ಚು, ಹಾಗೂ ಆ ದುಷ್ಟ ದೈತ್ಯನ ಎಡಪಾದದ ಗುರುತು ಎಲ್ಲವೂ ಮುಂದೆ ಪತ್ಥರ್ ಸಾಹಿಬ್ ಎಂದೇ ಪ್ರಸಿದ್ಧಿಯಾಯಿತು. ಸಾವಿರದೈದುನೂರಾ ಹದಿನೇಳರಿಂದ ಸಾವಿರದೊಂಬೈನೂರಾ ಅರವತ್ತೈದರ ತನಕ ಇದನ್ನು ಸ್ಥಳೀಯ ಲಾಮಾಗಳು ನೋಡಿಕೊಳ್ಳುತ್ತಿದ್ದು ಆ ನಂತರ ಭಾರತೀಯ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿತು. ಅದೇ ವರ್ಷದಲ್ಲಿ ಈ ಗುರುದ್ವಾರವು ಕಟ್ಟಲ್ಟಟ್ಟು, ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ಸೈನ್ಯವೇ ಈ ಗುರುದ್ವಾರದ ನಿರ್ವಹಣೆಯನ್ನೂ, ಪ್ರತೀ ಭಾನುವಾರದ ಗ್ರಂಥಪಾಠವನ್ನೂ, ಅನ್ನ ಸಂತರ್ಪಣೆಯನ್ನೂ ನಡೆಸಿಕೊಂಡು ಬಂದಿದೆ...
ರಸ್ತೆಯ ಬಲಕ್ಕಿದ್ದ ಗುರುದ್ವಾರವನ್ನು ತಲುಪಿ, ನಮ್ಮ ಸೈಕಲ್‌ಗಳನ್ನು ರಸ್ತೆಯ ಬದಿಗಿರಿಸಿ ನಾವು ಪ್ರಾಂಗಣಗೊಳಕ್ಕೆ ನಡೆದೆವು. ಆ ನಂತರ ನಮ್ಮ ಶೂಗಳನ್ನೂ, ಹೆಲ್ಮೆಟ್, ಬ್ಯಾಗುಗಳನ್ನೂ ಚಪ್ಪಲಿ ರ್‍ಯಾಕಿನ ಬಳಿ ನಿಂತಿದ್ದ ಸೈನಿಕರಿಗೆ ಕೊಟ್ಟು, ಅವರ ಮುಗುಳ್ನಗೆಗೆ ಪ್ರತಿಯಾಗಿ ಮುಗುಳ್ನಗುತ್ತ ಕೈಕಾಲು ತೊಳೆದುಕೊಂಡು ಮೊದಲು ಚಹಾ-ಬೂಂದಿಕಾಳಿನ ಆಸರೆ ಸೇವಿಸುತ್ತ ಕಾಲು ನೀಡಿಕೊಂಡು ಗುರುದ್ವಾರದ ಬಟ್ಟೆಯ ಮಂಟಪದ ನೆರಳಿನಲ್ಲಿ ಕುಳಿತೆವು. ಮೈಕಿನಲ್ಲಿ ಒಳಗೆ ನಡೆಯುತ್ತಿದ್ದ ಗ್ರಂಥಪಾಠ ಕೇಳಿ ಬರುತ್ತಿತ್ತು. ಹತ್ತು ನಿಮಿಷ ಸುಧಾರಿಸಿಕೊಂಡು, ಮತ್ತೆ ಕೈ ತೊಳೆದುಕೊಂಡು, ಅವರೇ ಕೊಟ್ಟ ಕೇಸರಿ ಬಟ್ಟೆಯನ್ನು ತಲೆಗೂದಲು ಮುಚ್ಚುವಂತೆ ಕಟ್ಟಿಕೊಂಡು, ಗುರುದ್ವಾರದೊಳಕ್ಕೆ ಹೋಗಿ ಪತ್ಥರ್ ಸಾಹಿಬ್‌ನ ದರ್ಶನ ಮಾಡಿಕೊಂಡು, ಗ್ರಂಥಸಾಹಿಬದ ಮುಂದೆ ಮಂಡಿಯೂರಿ ಪ್ರಾರ್ಥನೆ ಮಾಡಿದೆವು.
ಒಂದುಗಂಟೆಗೆಲ್ಲ ಅನ್ನಸಂತರ್ಪಣೆ ಶುರುವಾಯಿತು. ಸೈನಿಕರು ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುತ್ತ ಸಾಲಾಗಿ ಕುಳಿತ ಐನೂರು ಜನಕ್ಕೆಲ್ಲ ಉಪಚರಿಸುತ್ತ ಊಟ ಬಡಿಸಿದರು. ಚಪಾತಿ, ಎರಡು ಬಗೆಯ ಪಲ್ಯ, ಮೊಸರು-ಈರುಳ್ಳಿ, ಸ್ಟೀಲ್ ಬಟ್ಟಲಿನೊಳಕ್ಕೆ ಅಕ್ಕಿ ಪಾಯಸ - ಅದಕ್ಕೊಂದು ಚಮಚ, ಅನ್ನ, ಬೇಳೆ ಕೊದಕು. ದಿಲ್ಲಿ ಬಿಟ್ಟಾಗಿನಿಂದ ಬರೀ ಆಲೂ-ಪರಾಟಾ, ಗೋಬೀ ಪರಾಟಗಳನ್ನೇ ತಿಂದು ಬೇಸತ್ತಿದ್ದ ನಮಗೆ ಈ ಊಟ ಅಮೃತಸಮಾನವೆನಿಸಿತು. ನಾವಿಬ್ಬರೂ ಮೊದಲನೇ ತುತ್ತು ಬಾಯಿಗಿಟ್ಟುಕೊಳ್ಳುವಷ್ಟರಲ್ಲಿ, ಗುರುದ್ವಾರದ ಹೊರಗೆ ನಮ್ಮ ತಂಡದ ಇನ್ನುಳಿದವರು ಒಬ್ಬೊಬ್ಬರಾಗಿ ಕಾಣಿಸಿಕೊಂಡರು.
ನಾನೂ ನನ್ನ ಸ್ನೇಹಿತನೂ ಗಡದ್ದಾಗಿ ಊಟ ಮಾಡಿದೆವು. ನಮ್ಮ ತಟ್ಟೆಗಳನ್ನೂ ಕೂಡಾ ಅದೇ ಪ್ರೀತಿಯಿಂದ ಸೈನಿಕರು ದೊಡ್ಡ ಪಾತ್ರೆಯೊಳಕ್ಕೆ ತುಂಬಿಕೊಂಡು ತೊಳೆಯುವಲ್ಲಿಗೆ ಕೊಂಡೊಯ್ಯುತ್ತಿದ್ದರು. ತಟ್ಟೆಗಳನ್ನು ತೊಳೆಯುವಲ್ಲಿ ಸುಮಾರು ಹತ್ತು ಜನ ಸೈನಿಕರು, ತಮ್ಮ ಶೂ-ಕಾಲು ಚೀಲಗಳನ್ನೆಲ್ಲ, ಒಪ್ಪವಾಗಿ ಬಿಚ್ಚಿಟ್ಟು, ತಮ್ಮ ಸಮವಸ್ತ್ರದ ತೋಳುಗಳನ್ನು ಮಡಿಸಿಕೊಂಡು ನಮ್ಮ ಎಂಜಲು ತಟ್ಟೆಗಳನ್ನು ತೊಳೆಯುತ್ತಿದ್ದರು. ಇನ್ನೂ ಕೆಲವರು ತೊಳೆದಿಟ್ಟ ತಟ್ಟೆ, ಲೋಟ, ಬಟ್ಟಲುಗಳನ್ನು ಶುಭ್ರವಾದ ಬಟ್ಟೆಗಳಿಂದ ಒರೆಸಿ, ಊಟದ ಮುಂದಿನ ಸರತಿಗೆ ಅಣಿ ಮಾಡಿಡುತ್ತಿದ್ದರು.
ನಾವಿಬ್ಬರೂ ಕೈ ತೊಳೆದು-ಒರೆಸಿಕೊಂಡು ಬಂದು ಮತ್ತೆ ವಿಶ್ರಾಂತಿಗೋಸ್ಕರ ಕುಳಿತೆವು. ನಮ್ಮಿಬ್ಬರ ಮಾತುಗಳು ಗುರುದ್ವಾರದ ಸುತ್ತಲೇ ಸುತ್ತುತ್ತಿದ್ದವು. ಈ ಉರಿಬಿಸಿಲ ಮಾರ್ಗದಲ್ಲಿ ಬಾಯಾರಿ ಬಂದವರಿಗೆ ನೀರು ನೆರಳಾಗಿ, ಹಸಿದು ಬಂದವರಿಗೆ ಅನ್ನವಾಗಿ ನಿಂತ ಪ್ರಶಾಂತ-ಪವಿತ್ರ ವಾತಾವರಣದ ಈ ಗುರುದ್ವಾರದ ವೈಶಿಷ್ಟ್ಯವಿರುವುದು ಇದರ ನಿರ್ವಹಣೆಯಲ್ಲಿ. ತಾವು ಹುಟ್ಟಿದೂರುಗಳಿಂದ ಹಳ್ಳಿ-ಪಟ್ಟಣಗಳಿಂದ, ತಮ್ಮ ಬಂಧು ಬಾಂಧವರಿಂದ ದೂರ ಬಂದು, ಇಂತಹ ಒರಟು, ಬರಡು ನೆಲದಲ್ಲಿ ದೇಶಸೇವೆಯ ಹೆಸರಿನಲ್ಲಿ ನೆಲೆನಿಂತ ಸೈನಿಕರು ಇಲ್ಲಿ ತಮ್ಮದೇ ಆದ ಪ್ರಪಂಚವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಸರತಿಯ ಪ್ರಕಾರ ಗುರುದ್ವಾರದ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಶೂ-ಚಪ್ಪಲಿ ರ್‍ಯಾಕ್ ನೋಡಿಕೊಳ್ಳುವುದರಿಂದ ಹಿಡಿದು, ನಮ್ಮ ಹಣೆಗೆ ಕೇಸರಿಯ ಮುಂಡು ಕಟ್ಟಿ, ಕನ್ನಡಿಯಲ್ಲಿ ಮುಖ ತೋರಿಸಿ ನಮ್ಮನ್ನು ಗುರುದ್ವಾರದೊಳಕ್ಕೆ ನಗುತ್ತಾ ಕಳಿಸಿಕೊಟ್ಟು, ಅಡಿಗೆ ಮಾಡುವುದು, ತಟ್ಟೆ ತೊಳೆಯುವುದು, ಬಡಿಸುವುದು ಎಲ್ಲವನ್ನೂ ತೆರೆದ ಹೃದಯದಿಂದ ಮಾಡುತ್ತಾರೆ. ಅವರ ಕಣ್ಣಂಚಿನ ಹೊಳಪಿನಲ್ಲಿ, ತುಟಿಯಂಚಿನ ನಗುವಿನಲ್ಲಿ, ಕೈ ಹಿಂದಕ್ಕೆ ಕಟ್ಟಿಕೊಂಡು ಅವರು ತೋರುವ ಆದರದಲ್ಲಿ, 'ಕಹಾಂಸೇ ಹೈ ಆಪ್', 'ಬಹುತ್ ಮೆಹನತ್ ಕರ್ ರಹೇ ಹೈ ಆಪ್ ಲೋಗ್(!)', 'ಬಂಗಲೂರ್ ತೋ ಅಬ್ ವರ್ಲ್ಡ್ ಫೇಮಸ್ ಹೈ' ಅನ್ನುವ ಮಾತುಗಳಲ್ಲಿ ಅವರ ತೆರೆದ ಹೃದಯ ಕಾಣುತ್ತದೆ. ನಾವೇ ಹೆಚ್ಚು-ನಮ್ಮ ಕೆಲಸವೇ ಕಷ್ಟಕರ ಅಂದುಕೊಳ್ಳುವ ನಾವೆಲ್ಲ ಅವರ ವಾಮನಾವತಾರದ ಮುಂದೆ ಬಲಿಚಕ್ರವರ್ತಿಗಳಂತಾಗಿಬಿಡುತ್ತೇವೆ. ನಮ್ಮ ಹಮ್ಮು ಬಿಮ್ಮು, ಗರ್ವ, ನಾಚಿಕೆ ಯಾವುದನ್ನೂ ಗಮನಿಸದ ಅವರು ಮುಗ್ಧರಾಗಿ ನಮ್ಮ ಸೇವೆ ಮಾಡುತ್ತಾರೆ. ಬಡಿಸುತ್ತಿರುವ ಸಲಾಡ್‌ನ ತಟ್ಟೆಯಿಂದ ಬರಿಯ ಸೌತೇಕಾಯಿ ಮಾತ್ರ ಹಾಕಿ ಅಂದರೆ ಅದನ್ನು ಮಾತ್ರ ಇಕ್ಕಳದಲ್ಲಿ ಒಟ್ಟು ಮಾಡಿ ನಗುತ್ತಲೇ ನಮ್ಮ ತಟ್ಟೆಯೊಳಗಿನ ಬಟ್ಟಲಿನೊಳಕ್ಕೆ ಒಪ್ಪವಾಗಿ ಬಡಿಸುತ್ತಾರೆ ಮತ್ತು 'ಸಾಕೇ?' ಎಂದು ಕೇಳುತ್ತಾರೆ.
ಎಲ್ಲ ಜಾತಿ, ಧರ್ಮ, ನಂಬಿಕೆಗಳನ್ನು ಬಿಟ್ಟು ಬಂದಿರುವ ಸೈನಿಕರು ಇಲ್ಲಿ ಗುರು-ಪತ್ಥರ್ ಸಾಹಿಬ್ ಮುಂದೆ ತಲೆ ಬಾಗುತ್ತಾರೆ, ನೆಲಕ್ಕೆ ಹಣೆ ತಾಕಿಸುತ್ತಾರೆ, ಇದರ ಪವಾಡವನ್ನು ನಂಬುತ್ತಾರೆ, ಯುದ್ಧ ವಿಜಯಗಳಿಗಾಗಿ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ವಿಜಯಿಯಾದ ಬೆಟಾಲಿಯನ್/ರೆಜಿಮೆಂಟಿನವರು ಈ ಗುರುದ್ವಾರಕ್ಕೆ ಹೊಸತನ್ನೇನಾದರೂ ಉಡುಗೊರೆ ಕೊಡುತ್ತಾರೆ...
ಲೇಹ್-ಶ್ರೀನಗರ ಹೆದ್ದಾರಿಯುದ್ದಕ್ಕೂ ದೇವಸ್ಥಾನಗಳು, ಕೆಲವು ಬೌದ್ಧ ಮಠಗಳು, ನೀರಿನ ಅರವಟ್ಟಿಗೆಗಳು, ರಸ್ತೆಗಳು, ಮಾರ್ಗದ ಎಲ್ಲ ಹಳ್ಳಿಗಳ ವಿದ್ಯುತ್-ದೂರವಾಣಿ ಸಂಪರ್ಕಗಳು ಎಲ್ಲದರ ನಿರ್ವಹಣೆ ಈ ಸೈನಿಕರದ್ದೇ. ದಾರಿಯುದ್ದಕ್ಕೂ ಸಿಗುವ ನೂರಾರು ಸೈನಿಕ ವಸಾಹತುಗಳಲ್ಲೂ ದೇವಸ್ಥಾನಗಳು, ಟೈಲರ್ ಶಾಪುಗಳು, ಕ್ಷೌರದಂಗಡಿಗಳು, ಸಣ್ಣ ಸಣ್ಣ ಹೋಟೇಲ್‌ಗಳು, ದೂರವಾಣಿ ಕೇಂದ್ರಗಳು, ಪ್ರಥಮ ಚಿಕಿತ್ಸಾ ಘಟಕಗಳು, ಎಲ್ಲವೂ ಇವೆ. ದಾರಿಯಲ್ಲಿ ಯಾರಾದರೂ ಲಿಫ್ಟ್ ಕೇಳಿ, ಕೈ ಅಡ್ಡ ಹಾಕಿದರೆ ಸೈನ್ಯದ ಲಾರಿ ಕೂಡ ನಿಲ್ಲುತ್ತದೆ. ಎದುರಿಗೆ ಬರುವ ಸೈನ್ಯದ ಲಾರಿಗಳೆಡೆಗೆ ಕೈಬೀಸಿದರೆ ಅವರೂ ನಮಗಿಂತ ಹೆಚ್ಚಾಗೇ ಸಂತುಷ್ಟರಾಗಿ ಕೈ ಬೀಸುತ್ತಾರೆ, ನಮ್ಮ ಸಲಾಮಿಗೊಂದು ಸಲಾಮ್ ಮಾಡುತ್ತಾರೆ. ದಾರಿಯಲ್ಲೆಲ್ಲಾದರೂ ಮುಖತಃ ಸಿಕ್ಕು, ಮಾತಿಗೆ ನಿಂತರೆ ಖುಷಿ-ಖುಷಿಯಾಗಿ ಮಾತನಾಡುತ್ತಾರೆ. ಎಲ್ಲವನ್ನೂ ಹೇಳುತ್ತಾರೆ, ಅಸ್ಥೆಯಿಂದ ನಮ್ಮ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾರೆ. ಸ್ವಲ್ಪ ಸಂಕೋಚದಿಂದಲೇ ನಮ್ಮನ್ನು ಪ್ರಶ್ನಿಸುತ್ತಾರೆ. ನಾವು, ನಮ್ಮ ಕೆಲಸ; ನಾವು ಅಲ್ಲಿಗೆ ಬಂದಿರುವುದರ ಉದ್ದೇಶ ಹೇಳಿದರೆ, 'ಪರವಾಗಿಲ್ವೇ, ಸಕ್ಕತ್ ಸಾಹಸ ಮಾಡ್ತಾ ಇದೀರಾ?' ಅಂತ್ಹೇಳಿ ತಮಗರಿವಿಲ್ಲದೇ ನಮ್ಮನ್ನು ನಾಚಿಕೆಗೀಡುಡು ಮಾಡಿಬಿಡುತ್ತಾರೆ...
ಮಾತು ಮುಗಿದು, ವಿಶ್ರಾಂತಿಯೂ ಮುಗಿದು, ಮುಂದಿದ್ದ ದಾರಿಯ ನೆನಪಾಗಿ ನಾವಿಬ್ಬರೂ ಕಟ್ಟಿಕೊಂಡಿದ್ದ ಕೇಸರಿ ತಲೆಬಟ್ಟೆಗಳನ್ನು ವಾಪಸ್ಸು ಕೊಟ್ಟು, ನಮ್ಮ ಸಾಮಾನು-ಸರಂಜಾಮುಗಳೊಂದಿಗೆ ಸೈಕಲ್‌ಗಳನ್ನೇರಿದೆವು. ಶೂ-ರ್‍ಯಾಕ್ ನೋಡಿಕೊಳ್ಳುತ್ತಿದ್ದ ಸೈನಿಕನೊಬ್ಬ ಕೇಳಿದ...
"ಎಲ್ಲೀತನಕ ಸೈಕಲಿಂಗ್?'
"ಲಾಮಾಯುರು ತನಕ! ಆದ್ರೆ ಇವತ್ತು ನಮ್ಮ ಕ್ಯಾಂಪ್ ಬಾಸ್ಗೋದಲ್ಲಿ"
"ಮತ್ತೆ ಲಾಮಾಯುರುಗೆ ಹೋಗೋದ್ಯಾವತ್ತು?"
"ನಾಳೆ-ಅಲ್ಲ-ನಾಡಿದ್ದು. ನಾಳೆ ನುರ್ಲಾದಲ್ಲಿ ಹಾಲ್ಟ್!"
"ಪರ್ವಾಗಿಲ್ವೇ! ಬೆಸ್ಟ್ ಆಫ್ ಲಕ್!"
"ಥ್ಯಾಂಕ್ಸ್! ರಸ್ತೆ ಇನ್ಮುಂದೆ ಹೀಗೇ ಇಳೀಜಾರೋ ಅಥವಾ?"
"ಹೌದು... ಇನ್ನು ಬಾಸ್ಗೋ ತಲುಪೋ ತನಕ ಇಳೀಜಾರು ರಸ್ತೇನೇ!"
"ಥ್ಯಾಂಕ್ಸ್! ಬರೋಣವೇ?"
"ಹೊಗಿ ಬನ್ನಿ! ಏನೋ ಸಕ್ಕತ್ ಸಾಹಸ ಮಾಡ್ತಾ ಇದೀರಾ, ಒಳ್ಳೆಯದಾಗಲಿ!"
ಸಿಖ್ ಧರ್ಮದ ಮೂಲಮಂತ್ರ ('ರಂಗ್ ದೇ ಬಸಂತಿ' ಚಿತ್ರದಿಂದಾಗಿ ಈ ಮಂತ್ರ ಈಗ ನಿಮಗೆಲ್ಲರಿಗೂ ಗೊತ್ತಿರಬಹುದು)
"ಇಕ್ ಓಂಕಾರ್, ಸತ್ ನಾಮ್, ಕರ್ತಾ ಪುರಖ್,
ನಿರ್ ಭವ್, ನಿರ್ ವೈರ್, ಅಕಾಲ್ ಮೂರತ್,
ಅಜೂನಿ, ಸೈಭಂಗ್, ಗುರು ಪ್ರಸಾದ್, ಜಪ್,
ಆದಿ ಸಚ್, ಜುಗಾದ್ ಸಚ್, ಹೈ ಭೀ ಸಚ್, ನಾನಕ್ ಹೋ ಬೆ ಸಚ್"
ಭಾವಾರ್ಥ (ನನ್ನ ಅನುವಾದ)
ದೇವನೊಬ್ಬನೇ-ಸತ್ಯವೇ ಅವನ ನಾಮ. ಅವನೇ ಸೃಷ್ಟಿಕರ್ತನು, ತನ್ನೆಲ್ಲ ಸೃಷ್ಟಿಯೊಳಗೆ ಸೇರಿಕೊಂಡಿರುವಂಥವನು.
ಅವನು ನಿರ್ಭಯನು, ವೈರವಿಲ್ಲದವನು, ಅನಂತನು, ಜೀವನ ಚಕ್ರವನ್ನೆಲ್ಲ ಮೀರಿದವನು
ಅವನು ಸ್ವಯಂಭು, ಗುರುವಿನ ಆಶೀರ್ವಾದ ಮಾತ್ರದಿಂದಲೇ ನಮ್ಮಲ್ಲಿ ಸಾಕಾರಗೊಳ್ಳುವವನು
ಹಾಗಾಗಿ, ಅವನ ನಾಮವನ್ನು ಜಪಿಸಿ, ಯಾಕೆಂದರೆ 'ಆದಿಯಿಂದ ಅವನೇ ಸತ್ಯವಾಗಿರುವವನು,
ಯುಗಯುಗಗಳಿಂದಲೂ ಸತ್ಯವಾಗಿಯೇ ಉಳಿದಿರುವವನು ಇಂದಿಗೂ ಸತ್ಯವಾಗಿರುವವನು',
ನಾನಕ್ ಹೇಳುತ್ತಾರೆ, 'ಅವನು ಇನ್ನು ಅನಂತಾನಂತಕ್ಕೂ ಸತ್ಯವಾಗಿಯೇ ಉಳಿಯುವವನು.'
...
ಹ್ಯಾವ್ ಎ ನೈಸ್ ಡೇ
ಶಿವಕುಮಾರ ಕೆ. ಎಸ್.

Re: ಪ್ರವಾಸ ಪ್ರಸಂಗ - ೩ : ಗುರುದ್ವಾರ ಪತ್ಥರ್ ಸಾಹಿಬ್
bahala chennagide. Nanu kuda pravasa maadidha haage Ayithu.
Yours sincerely,
H.V. Satheesh
CHITRADURGA.
Re: ಪ್ರವಾಸ ಪ್ರಸಂಗ - ೩ : ಗುರುದ್ವಾರ ಪತ್ಥರ್ ಸಾಹಿಬ್
ಇದು ಯೂತ್ ಹಾಸ್ಟೆಲ್ (ನೋಡಿ YHA India) ವತಿಯಿಂದ ಆಯೋಜಿಸಲ್ಪಟ್ಟಿದ್ದ ಸಾಹಸಕ್ರೀಡೆ. ಇವರು ಬೇರೆಲ್ಲರಿಗಿಂತ ತುಂಬಾ ಅಗ್ಗವಾದ, ವಿಭಿನ್ನವಾದ, ಜವಾಬ್ದಾರಿಯುತ ಸಾಹಸ ಯಾತ್ರೆ/ಕ್ರೀಡೆಗಳನ್ನ ವರ್ಷವಿಡೀ ಆಯೋಜಿಸ್ತಾರೆ.
ನಮ್ಮ ಲೇಹ್-ಲದ್ದಾಕ್ ಬೈಕಿಂಗ್ ಗೆ ನಾವು ಅವರಿಗೆ ಕೊಟ್ಟಿದ್ದು ಬರೀ 4100 ರೂಪಾಯಿ ಮಾತ್ರ. ಇದರಲ್ಲಿ ಹನ್ನೊಂದು ದಿನದ ಊಟ-ವಸತಿ, ಸೈಕಲ್ಲುಗಳು, ಗೈಡು ಎಲ್ಲ ಸೇರಿದೆ! ನಾವು ಬೆಂಗಳೂರಿನಿಂದ ಲೇಹ್ ತಲುಪಿದ್ದು, ವಾಪಸ್ಸು ಬಂದಿದ್ದು ಎಲ್ಲ ನಮ್ಮ ಖರ್ಚು... ಎಲ್ಲ ಸೇರಿ (ನಾವು ಸ್ವಲ್ಪ ದುಬಾರಿ ಜನ ನೋಡಿ
:) ರಜೆ ಉಳಿಸಲೋಸುಗ ಎಲ್ಲ ಕಡೆಗೂ ಹಾರಾಡಿದ್ದೇ ಹಾರಾಡಿದ್ದು) ಹತ್ತಿರ ಹತ್ತಿರ 20000 ಆಯ್ತು. ಆದರೆ ಟ್ರೈನು ಅಂತೆಲ್ಲ ಹೋದರೆ ಬರೀ ಹತ್ತು ಸಾವಿರದೊಳಗೆ ಇದು ಸಾಧ್ಯವಾಗಬಹುದೇನೋ!
Re: ಪ್ರವಾಸ ಪ್ರಸಂಗ - ೩ : ಗುರುದ್ವಾರ ಪತ್ಥರ್ ಸಾಹಿಬ್
ಹಾಯ್ ಶಿವಕುಮಾರ್,
ಈ ಅನುಭವ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದನ್ನು ಓದಿದಂತೆ ಇದೇ ರೀತಿ ಸೈಕ್ಲಿಂಗ್ ಹೋಗಬೇಕು ಅನ್ನೋ ಆಸೆ ಕೂಡಾ ಆಗುತ್ತಿದೆ.
ಈ ತರಹದ ಪ್ರವಾಸಕ್ಕೆ ಸುಮಾರು ಎಷ್ಟು ಖರ್ಚಾಗುತ್ತೆ? ಎಲ್ಲಾ ವ್ಯವಸ್ಥೆ ಆ ಸಂಸ್ಥೆಯೇ ನೋಡಿಕೊಳ್ಳುತ್ತದೆಯೇ?
ಸೈನಿಕರ ಬಗ್ಗೆ ಅನೇಕ ಕಥೆ ಕೇಳಿದ್ದ ನನಗೆ ಅವರ ಇನ್ನೊಂದು ಮುಖದ ಬಗ್ಗೆ ಪರಿಚಯ ಆಯ್ತು.
ತುಂಬಾ ಥ್ಯಾಂಕ್ಸ್!
ನಿಮ್ಮ ಅನಿಸಿಕೆ ತಿಳಿಸಿ